ದುಬೈ: ಜಗತ್ತಿನಾದ್ಯಂತ ಕನ್ನಡಿಗರು ನವೆಂಬರ್ 1 ರಂದು ಅತ್ಯಂತ ಸಡಗರ-ಸಂಭ್ರಮದಿಂದ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಯುಎಇಯ ದುಬೈನಲ್ಲಿ ನೆಲೆಸಿರುವ ಪ್ರವಾಸಿ ನಾಖುದಾ ಸಮುದಾಯವು ರಕ್ತದಾನ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಬೃಹತ್ ರಕ್ತದಾನ ಶಿಬಿರದಲ್ಲಿ ಸಮುದಾಯದ ನೂರಾರು ಪ್ರವಾಸಿ ಬಾಂಧವರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ಹೆತ್ತ ತಾಯ್ನಾಡು ಮತ್ತು ನುಡಿಯ ಮೇಲಿನ ಭಕ್ತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಮತ್ತೊಂದು ಜೀವಕ್ಕೆ ಆಸರೆಯಾಗುವ ಮಾನವೀಯ ಕಾರ್ಯದ ಮೂಲಕ ಕನ್ನಡದ ಕೀರ್ತಿಯನ್ನು ಎತ್ತಿಹಿಡಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸತತ 3ನೇ ವರ್ಷದ ಸಾಧನೆ: ಪ್ರವಾಸಿ ನಾಖುದಾ ಸಮುದಾಯವು ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಇದು ಸತತ ಮೂರನೇ ಬಾರಿಯಾಗಿದೆ. ಗಲ್ಫ್ ರಾಷ್ಟ್ರದಲ್ಲಿ ಕನ್ನಡ ಹಬ್ಬವನ್ನು ಇಂತಹ ಮಹತ್ಕಾರ್ಯದೊಂದಿಗೆ ಜೋಡಿಸಿ ಪ್ರತಿ ವರ್ಷವೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವುದು ಸಮುದಾಯದ ಸಾಮಾಜಿಕ ಬದ್ಧತೆ ಹಾಗೂ ಹೆಮ್ಮೆಗೆ ಸಾಕ್ಷಿಯಾಗಿದೆ.


ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವುದರ ಜೊತೆಗೆ, ಸಮಾಜಕ್ಕೆ ನಮ್ಮ ಕೈಲಾದ ಕೊಡುಗೆಯನ್ನು ನೀಡುವುದು ನಮ್ಮ ಆಶಯವಾಗಿದೆ. ರಕ್ತದಾನಕ್ಕಿಂತ ಮಿಗಿಲಾದ ಸೇವೆ ಮತ್ತೊಂದಿಲ್ಲ. ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಿದ ಪ್ರತಿಯೊಬ್ಬ ನಾಖುದಾ ಬಾಂಧವರಿಗೂ ಧನ್ಯವಾದಗಳು ಎಂದು ಸಮುದಾಯದ ಪ್ರಮುಖರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.ಸಮುದಾಯದ ಈ ನಿರಂತರ ಮಾನವೀಯ ಮತ್ತು ಸಾಂಸ್ಕೃತಿಕ ಕಳಕಳಿಗೆ ಅನಿವಾಸಿ ಕನ್ನಡಿಗರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಹಾಗೂ ದುಬೈ ಆರೋಗ್ಯ ಪ್ರಾಧಿಕಾರವು ಪ್ರಶಂಸನಾ ಪತ್ರವನ್ನು ನೀಡುವ ಮೂಲಕ ಸನ್ಮಾನಿಸಿದೆ.