ಬೈಂದೂರು,ಅ.31: ಪ್ರಜಾಸೇವೆಯ ಮೂಲ ಉದ್ದೇಶ ತಾಲೂಕು ಕೇಂದ್ರದಲ್ಲಿ ಸಣ್ಣ ಪುಟ್ಟ ಕೆಲಸಕ್ಕೂ ಜನಸಾಮಾನ್ಯರು ಅಲೆಯಬಾರದು .ಗ್ರಾಮ ಮಟ್ಟದಲ್ಲಿ ಎಲ್ಲಾ ಅಧಿಕಾರಿಗಳು ಜನರ ಸೇವೆಗೆ ದೊರೆಯಬೇಕು ಎನ್ನುವುದಾಗಿದೆ.ಆದರೆ ಶಿರೂರಿನಲ್ಲಿ ಅಧಿಕಾರಿಗಳು ಹೊರತುಪಡಿಸಿದರೆ ಸಾರ್ವಜನಿಕರು ಆಗಮಿಸಿಲ್ಲ ಕಾರಣ‍ ಸರಿಯಾದ ಮಾಹಿತಿ ಮತ್ತು ಪ್ರಚಾರದ ಕೊರತೆಯಾಗಿದೆ.ಇದಕ್ಕೆ ಪ್ರಜಾಸೇವೆಯ ಜವಬ್ದಾರಿಯುತ ಅಧಿಕಾರಿಗಳ ನಿರ್ಲಕ್ಷ ಕಾರಣವಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ಶಿರೂರು ಕರಿಕಟ್ಟೆ ದುರ್ಗಾಂಬಿಕಾ ಸಭಾ ಭವನದಲ್ಲಿ ನಡೆದಿದೆ.ಪ್ರಜಾಸೇವೆ ಇಲಾಖೆ ತಾಲೂಕು ಆಡಳಿತ ಬೈಂದೂರು,ಬೈಂದೂರು ಹೋಬಳಿಯ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸರಕಾರದ ಪ್ರಜಾಸೇವೆ ಸಮರ್ಪಕವಾಗಿ ನಡೆಸಲು ಸೂಚಿಸಿದರು.
ಸಮಸ್ಯೆ ಪರಿಹರಿಸಲು ಸೂಚನೆ:ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 79 ಅರ್ಜಿಗಳು ಬಂದಿದ್ದು ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಅಧಿಕವಾಗುತ್ತಿದೆ.ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ.ಕಛೇರಿಯಲ್ಲಿ ಲಂಚ ನೀಡಿದರೆ ಮಾತ್ರ ಕೆಲಸವಾಗುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಕೇಳಿ ಬಂದಿದೆ.ಇದು ಕಂದಾಯ ಇಲಾಖೆಯ ವೈಫಲ್ಯಕ್ಕೆ ಕಾರಣ.ಸ್ವತಃ ಶಾಸಕರು ಕರೆ ಮಾಡಿ ತಿಳಿಸಿದರು ಕೂಡ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದಿರುವುದು ಇಲಾಖೆಯ ಬೇಜಬ್ದಾರಿಯನ್ನು ಬಿಂಬಿಸುತ್ತದೆ.ಈ ಕುರಿತು ದೂರುಗಳು ಬಂದಿದೆ ಮತ್ತು ಇದರ ಸಮಗ್ರ ತನಿಖೆಗೆ ನಿರ್ದೇಶನ ನೀಡಿದ್ದೇನೆ.
ಗ್ರಾಮೀಣ ಭಾಗಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣವಾಗಲಿ:ಶಿರೂರು ಹಾಗೂ ವಿವಿಧ ಕಡೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿದ್ದು ಅರಣ್ಯ ಇಲಾಖೆ ಅವುಗಳ ನಿಯಂತ್ರಣದ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ ಸೌಲಭ್ಯ ಸಮರ್ಪಕವಾಗಿ ನೀಡಲು ಆಗ್ರಹ; ಶಿರೂರಿನಲ್ಲಿ ವಿದ್ಯಾರ್ಥಿನಿಯರಿಗೆ ಸರಕಾರಿ ಬಸ್ಸುಗಳಲ್ಲಿ ಕಿರುಕುಳ ಆಗುತ್ತಿದೆ ಎಂಬ ದೂರು ಬಂದಿದೆ.ವಿದ್ಯಾರ್ಥಿಗಳಿಗೆ ನಿಗಧಿತ ಸ್ಥಳಗಳಲ್ಲಿ ಬಸ್ ನಿಲುಗಡೆ ಮಾಡಬೇಕು ಮತ್ತು ಸಮರ್ಪಕವಾದ ಸೇವೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಅರಣ್ಯ,ಕಂದಾಯ,ರಸ್ತೆ ಸೇರಿದಂತೆ ವಿವಿಧ ವಿಷಯದ ಕುರಿತು ಅರ್ಜಿ ಬಂದಿದ್ದು ಅವುಗಳಿಗೆ ಶೀಘ್ರ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಪಶು ಆಹಾರ ಮೇವಿನ ಬೀಜಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಬೈಂದೂರು ಗ್ರೇಡ್ 1 ತಹಶೀಲ್ದಾರ ರವಿರಾಜ್ ದೀಕ್ಷಿತ್, ಗ್ರೇಡ್ 2 ತಹಶೀಲ್ದಾರ ರಾಮಚಂದ್ರಪ್ಪ, ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗಶಯನ,ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ ಉಪ್ಪುಂದ,ಶಿರೂರು ಗ್ರಾ.ಪಂ ಆಡಳಿತಾಧಿಕಾರಿ ಚಂದ್ರಹಾಸ,ಭೂ ನ್ಯಾಯ ಮಂಡಳಿ ಸದಸ್ಯ ಉದಯ ಪೂಜಾರಿ,ಪ್ರಭಾರ ವೃತ್ತ ನಿರೀಕ್ಷಕ ಜಯರಾಮ ಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ಸ್ವಾಗತಿಸಿದರು.ಶಿಕ್ಷಕ ಸಿ.ಎನ್.ಬಿಲ್ಲವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ/ಚಿತ್ರ ; ಗಿರಿ ಶಿರೂರು

Leave a Reply

Your email address will not be published. Required fields are marked *

fourteen + ten =