ಬೈಂದೂರು,ಜು.25:  ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕುಂದಾಪ್ರ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೈಂದೂರು ವತಿಯಿಂದ ಆಗಸ್ಟ್ 23ರಂದು ನಡೆಯಲಿರುವ ಮೂರನೇ ವರ್ಷದ ‘ಗಮ್ಮತ್ತ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಬೆಳಗ್ಗೆಯಿಂದ ಸಂಜೆಯವರೆಗೆ ಯಡ್ತರೆ ನೆಲ್ಯಾಡಿ ಬೈಲ್ ಹಾಗೂ ಜೆ.ಎನ್.ಆರ್. ಹಾಲ್‌ನಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಇನ್ನಷ್ಟು ಕ್ರೀಡಾ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಪೋಸ್ಟರ್ ಅನ್ನು ಶುಕ್ರವಾರ ಉಪ್ಪುಂದದ ಸಾಹಿತಿ ಹಾಗೂ ವಾಗ್ಮಿ ಓಂ ಗಣೇಶ್ ಉಪ್ಪುಂದ ಅವರ ನಿವಾಸದಲ್ಲಿ ಅನಾವರಣಗೊಳಿಸಲಾಯಿತು.
ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದ ಅವರು ಕಲಾ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಊರಿನ ಜೀವಂತಿಕೆ ಅಡಗಿದೆ. ಇಂತಹ ಚಟುವಟಿಕೆಗಳ ಮೂಲಕ ಊರು ಮತ್ತು ಭಾಷೆಯ ಚಲನಶೀಲತೆಯನ್ನು ಹೆಚ್ಚಿಸುವ ಕಾರ್ಯ ಶ್ಲಾಘನೀಯವಾಗಿದೆ. ಕಳೆದ ಎರಡು ವರ್ಷಗಳಿಂದ ಈ ಬಾರಿ ‘ಗಮ್ಮತ್ತ್’ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜಿಸಲಾಗುತ್ತಿದ್ದು, ಈ ಬಾರಿಯೂ ಕಾರ್ಯಕ್ರಮ ಇನ್ನಷ್ಟು ಯಶಸ್ಸು ಕಾಣಲಿ ಎಂದು ಹಾರೈಸಿದರು.
ಕುಂದಾಪ್ರ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಪ್ರಾಸ್ತಾವಿಕವಾಗಿ ಮಾತನಾಡಿ, ಕುಂದಾಪ್ರ ಕನ್ನಡ ದಿನದ ಅಂಗವಾಗಿ ‘ಗಮ್ಮತ್ತ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಬಾರಿ ಇನ್ನಷ್ಟು ಕ್ರೀಡಾ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಅರ್ಚಕ ಸಂದೇಶ್ ಭಟ್, ಯುವ ಮುಂದಾಳುಗಳಾದ ಶೇಖರ ಪೂಜಾರಿ ಉಪ್ಪುಂದ, ನಾಗರಾಜ ಖಾರ್ವಿ, ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಅರುಣ್ ಕುಮಾರ್ ಶಿರೂರು, ಕುಂದಾಪ್ರ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ಜಿ. ಉಪ್ಪುಂದ, ಕಾರ್ಯದರ್ಶಿ ಸುನಿಲ್ ಎಚ್.ಜಿ., ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಕಿಶೋರ್ ಸಸಿಹಿತ್ಲು, ಜಯರಾಮ ಶೆಟ್ಟಿ ಉಪ್ಪುಂದ, ವೆಂಕಟರಮಣ ಮಯ್ಯಾಡಿ, ಪ್ರಶಾಂತ್ ಪಡುವರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

1 × two =