ಬೈಂದೂರು: ರಾಜ್ಯದ ಹಿರಿಯ ಪಂಚಾಯತ್‌ರಾಜ್ ಸಂಪನ್ಮೂಲ ವ್ಯಕ್ತಿ,ನಿವೃತ್ತ ಶಿಕ್ಷಕ,ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ,ಸಾಹಿತಿ ಎಸ್.ಜನಾರ್ಧನ ಮರವಂತೆ (88) ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ.ಮೃತರು ಹಿರಿಯ ಪತ್ರಕರ್ತರು, ಮರವಂತೆ ಗ್ರಾ.ಪಂ ಅಧ್ಯಕ್ಷರಾಗಿ ಮಾದರಿ ಗ್ರಾಮ ಪಂಚಾಯತ್ ಆಗಿ ರೂಪಿಸಿರುವ ಜೊತೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದಾರೆ.ಬೈಂದೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ,ಪಂಚಾಯತ್‌ರಾಜ್‌ನ ಹಿರಿಯ ಅನುಭವಿ.ಸಹಕಾರಿ ದುರೀಣ,ಅಜಾತಶತ್ರುವಾಗಿದ್ದು ಇಳಿವಯಸ್ಸಿನವರಾಗಿ ಅತ್ಯಂತ ಕ್ರಿಯಾಶೀಲರಾಗಿದ್ದರು.ಇತ್ತೀಚೆಗೆ ಕೆಲವು ಸಮಯದಿಂದ ವಯೋಸಹಜ ಬಳಲಿಕೆ ಕಂಡುಬಂದಿದ್ದು ಶುಕ್ರವಾರ ಕುಂದಾಪುರ ಆಸ್ಪತ್ರೆಗೆ ಕೊಂಡೊಯ್ದದ್ದು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ರಾಜ್ಯಶಾಸ್ತ್ರ ಮತ್ತು ಆಂಗ್ಲ ಸಾಹಿತ್ಯದಲ್ಲಿ ಪ್ರತ್ಯೇಕ ಸ್ನಾತಕೋತ್ತರ ಪದವಿ, ಶಿಕ್ಷಣದಲ್ಲಿ ಸ್ನಾತಕ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಆಂಗ್ಲ ಮತ್ತು ವಿದೇಶೀ ಭಾಷೆಗಳ ಅಧ್ಯಯನ ಸಂಸ್ಥೆಯಿಂದ ಆಂಗ್ಲಭಾಷಾ ಬೋಧನೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರುವ ಜನಾರ್ದನರು ಖಂಬದಕೋಣೆ, ಕುಂದಾಪುರ, ಬೈಂದೂರು, ಶಂಕರನಾರಾಯಣದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ಚಿಕ್ಕಮಗಳೂರಿನ ಸಖರಾಯಪಟ್ಟಣ ಮತ್ತು ನಾವುಂದದಲ್ಲಿ ಉಪನ್ಯಾಸಕರಾಗಿ ದುಡಿದು ೧೯೯೭ರಲ್ಲಿ ನಿವೃತ್ತರಾದರು. ಶಿಕ್ಷಕ ವೃತ್ತಿಯ ಅವಧಿಯಲ್ಲಿ ಸಂಸ್ಥೆಗಳ ಉನ್ನತಿಗೆ, ‘ಶಾಲಾ ಸಮುದಾಯ’ದ ಮೂಲಕ ಪರಿಸರದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿರುವರು. ಅವರು ನಡೆಸಿದ್ದ ಶೈಕ್ಷಣಿಕ ಪ್ರಯೋಗಕ್ಕೆ ರಾಷ್ಟಿçÃಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನಿಂದ ರಾಷ್ಟಿçÃಯ ಪುರಸ್ಕಾರ ಲಭಿಸಿದೆ. ಮಂಗಳೂರು ಆಕಾಶವಾಣಿಯಲ್ಲಿ ಆಂಗ್ಲಭಾಷೆಯಲ್ಲಿ ರೇಡಿಯೋ ಪಾಠಗಳನ್ನು ಪ್ರಸ್ತುತಪಡಿಸಿರುವರು. ವೃತ್ತಿ ನಿರತರಾಗಿರುವಾಗಲೇ ಮರವಂತೆಯ ಅಭಿವೃದ್ಧಿಗೆ ಅವರು ತಮ್ಮನ್ನು ಸಮರ್ಪಿಸಿಕೊಂಡವರು. ಇಲ್ಲಿನ ಪ್ರಾಥಮಿಕ ಆರೋಗ್ಯ ಘಟಕದ ಕಟ್ಟಡ ನಿರ್ಮಾಣ, ಸರ್ಕಾರಿ ಪ್ರೌಢಶಾಲೆಯ ಸ್ಥಾಪನಾ ಪ್ರಕ್ರಿಯೆಯಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸಿದುದಲ್ಲದೆ , ಮರವಂತೆ ವ್ಯಾಪ್ತಿಯಲ್ಲಿ ಸೇವೆ, ಸಂಸ್ಕೃತಿ, ಮನೋಲ್ಲಾಸದ ಗುರಿಹೊಂದಿದ ‘ಸಾಧನಾ ಸಮಾಜ ಸೇವಾ ವೇದಿಕೆ’ಯನ್ನು ಸ್ಥಾಪಿಸಿ, ಕಳೆದ ೪೦ ವರ್ಷಗಳುದ್ದಕ್ಕೆ ವಿವಿಧ ನೆಲೆಗಳಲ್ಲಿ ಅದರ ಕ್ರಿಯಾಶೀಲ ಕಾರ್ಯಕರ್ತರಾಗಿ ದುಡಿಯುತ್ತ ಬಂದಿರುವರು. ಈ ಅವಧಿಯಲ್ಲಿ ‘ಸಾಧನಾ’ ಊರಿನ, ಶಾಲೆಗಳ, ಆಸ್ಪತ್ರೆಯ ಮೂಲಸೌಲಭ್ಯ ಸೃಷ್ಟಿಯ ನಿಟ್ಟಿನಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿರುವುದಲ್ಲದೆ, ನಿರಂತರವಾಗಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತವಾಗಿದೆ.
ನಿವೃತ್ತಿಯ ಬಳಿಕ ಹದಿನೈದು ವರ್ಷ ಮರವಂತೆ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಎರಡು ಬಾರಿ ಅಧ್ಯÀಕ್ಷ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ಮರವಂತೆ ಗ್ರಾಮ ಪಂಚಾಯಿತಿ ಮಾಡಿದ ವಿಶೇಷ ಸಾಧನೆಗಳಿಗಾಗಿ ಎರಡು ರಾಷ್ಟಿçÃಯ, ಒಂದು ರಾಜ್ಯ ಮತ್ತು ಒಂದು ಜಿಲ್ಲಾ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಪ್ರಶಸ್ತಿಯೊಂದಿಗೆ ಅದಕ್ಕೆ ದೊರೆತ ನಗದು ಪುರಸ್ಕಾರದ ಮೊತ್ತ ೨೫ ಲಕ್ಷ ರೂಪಾಯಿ. ಅದರ ಕಾರ್ಯಕ್ಷಮತೆ ಮತ್ತು ಸಾಧನೆಯನ್ನು ಮೆಚ್ಚಿಕೊಂಡ ಪ್ರಸಿದ್ಧ ಉದ್ಯಮಿ ಡಾ. ಪಿ. ದಯಾನಂದ ಪೈ ಅದಕ್ಕೆ ಸುಸಜ್ಜಿತ ಕಚೇರಿ ಕಟ್ಟಡವೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಇವೆಲ್ಲದರ ಕಾರಣದಿಂದಾಗಿ ಮರವಂತೆಯು ರಾಜ್ಯದ ಮಾದರಿ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.
ಎಸ್. ಜನಾರ್ದನ ಅವರು ರಾಜ್ಯದ ಪಂಚಾಯತ್‌ರಾಜ್ ವಿಷಯ ಪರಿಣತರಲ್ಲೊಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆಡಳಿತ ತರಬೇತಿ ಸಂಸ್ಥೆ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಶ್ರೀಪೆರುಂಬುದೂರಿನ ರಾಜೀವ ಗಾಂಧಿ ರಾಷ್ಟಿçÃಯ ಯುವಜನ ಅಭಿವೃದ್ಧಿ ಸಂಸ್ಥೆ, ಬೆಂಗಳೂರಿನ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ, ಗುಜರಾತಿನ ಕಚ್ ನವನಿರ್ಮಾಣ ಅಭಿಯಾನ, ದೇಶದ ಯೋಜನಾ ಆಯೋಗ ನಡೆಸಿದ ವಿವಿಧ ಅಧ್ಯಯನ, ಬೋಧನೆ, ತರಬೇತಿ ಮತ್ತು ಸಂವಹನ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ತರಬೇತಿದಾರರಾಗಿ, ಪಠ್ಯಕ್ರಮ ಮತ್ತು ಪಠ್ಯ ಸಿದ್ಧತೆಯಲ್ಲಿ ದುಡಿದಿದ್ದಾರೆ. ಕೊಲ್ಕತ್ತಾದಲ್ಲಿ ೨೦೦೮ರ ಡಿಸೆಂಬರ್ ೧೨ ಮತ್ತು ೧೩ರಂದು ನಡೆದ ‘ಪಶ್ಚಿಮ ಬಂಗಾಲದಲ್ಲಿ ಗ್ರಾಮೀಣಾಭಿವೃದ್ಧಿಯ ಮೂರು ದಶಕಗಳು’ ಕುರಿತ ಅಂತಾರಾಷ್ಟಿçÃಯ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಜನಾರ್ದನರು ಲೇಖಕ, ಪತ್ರಕರ್ತರಾಗಿಯೂ ಗಮನ ಸೆಳೆದಿದ್ದಾರೆ. ೨೫ ವರ್ಷ ಉದಯವಾಣಿ, ಪ್ರಜಾವಾಣಿ ಅರೆಕಾಲಿಕ ವರದಿಗಾರರಾಗಿ ದುಡಿದುದಲ್ಲದೆ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹುದ್ದೆಯನ್ನೂ ನಿರ್ವಹಿಸಿದ್ದಾರೆ. ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಮಾರ್ಗದರ್ಶಿ ಎನಿಸಿರುವ ‘ಜನಾಧಿಕಾರ’ ಹೆಸರಿನ ಗ್ರಂಥ ರಚಿಸಿದ್ದು, ಅದು ಈಗಾಗಲೇ ನಾಲ್ಕು ಮುದ್ರಣಗಳನ್ನು ಕಂಡಿದೆ. ಡಾ. ಕೃಷ್ಣ ಕೊಥಾಯ್ ಬರೆದು, ಜರ್ಮನಿಯ ಲ್ಯಾಂಬರ್ಟ್ ಅಕಾಡೆಮಿಯು ಇಂಗ್ಲಿಷ್ ಹಾಗೂ ಜರ್ಮನ್ ಭಾಷೆಯಲ್ಲಿ ಪ್ರಕಟಿಸಿರುವ ‘ಸಮ್ ರಿಫ್ಲೆಕ್ಷನ್ಸ್ ಆನ್ ರೂರಲ್ ಇಂಡಿಯ’ ರಿಯಲ್ ಹೀರೋಸ್ ಆಫ್ ರೂರಲ್ ಇಂಡಿಯ ಶೀರ್ಷಿಕೆಯಡಿ ಜನಾರ್ದನರ ಪರಿಚಯ ಮತ್ತು ಸಾಧನೆಗಳು ದಾಖಲಾಗಿವೆ.
ಎಸ್. ಜನಾರ್ದನ ಅವರು ವಿವಿಧ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಗುರುತಿಸಿ ಹಲವು ಸಂಘ, ಸಂಸ್ಥೆಗಳು ಸನ್ಮಾನ, ಪ್ರಶಸ್ತಿಗಳ ಮೂಲಕ ಅವರನ್ನು ಗೌರವಿಸಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ೨೦೧೩ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ೨೦೧೫ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ೮೧ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲ್ಪಟ್ಟಿದ್ದಾರೆ. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಅವರಿಗೆ ೨೦೧೯ರ ‘ಸದಾನಂದ ಪ್ರಶಸ್ತಿ’ ನೀಡಿದೆ. ಹಿರಿಯ ನಾಗರಿಕರಾದ ಬಳಿಕ ವಿವಿಧ ಕ್ಷೇತ್ರಗಳಲ್ಲಿನ ಅವರ ಸಾಧನೆಗಾಗಿ ರಾಜ್ಯ ಸರಕಾರವು ೨೦೨೧ನೆ ಸಾಲಿನ ‘ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಿದೆ.
ಭಾನುವಾರ ಸಾರ್ವಜನಿಕ ದರ್ಶನ: ಮೃತರ ಪಾರ್ಥಿವ ಶರೀರ ಭಾನುವಾರ ಪೂರ್ವಾಹ್ನ ೮ ಗಂಟೆಗೆ ಮರವಂತೆ ಸಾಧನಾ ಸಭಾಭವನದಲ್ಲಿ ತರಲಿದ್ದು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.