ಬೈಂದೂರು: ಸೋಮವಾರವಷ್ಟೆ ಕಾಲ್ತೋಡು ಸಮೀಪದ ಬೀಜಮಕ್ಕಿ ಕಾಲುಸಂಕದಲ್ಲಿ ಏಳು  ವರ್ಷದ ವಿದ್ಯಾರ್ಥಿನಿಯೊರ್ವಳು  ನದಿಯಲ್ಲಿ ಕೊಚ್ಚಿ ಹೋಗಿರುವುದು ರಾಜ್ಯಮಟ್ಟದಲ್ಲೆ ಆತಂಕ ಉಂಟು ಮಾಡಿದೆ.ಇದರ ನಡುವೆ ಈ ಊರಿನ ಅನತಿ ದೂರದ ಎಳಜಿತ್ ಗ್ರಾಮದ ಸಾತೇರಿ ಹೊಳೆಗೆ ಅಡ್ಡಲಾಗಿ ಕಟ್ಟಿರುವ ಮರದ ದಿಮ್ಮಿಯ ಕಾಲುಸಂಕ ನಿತ್ಯ ಅಪಾಯಕ್ಕೆ ಮುನ್ಸೂಚನೆ ನೀಡುತ್ತಿದೆ.ಈ ಕಾಲು ಸಂಕದ ಮೂಲಕ ಪ್ರತಿದಿನ ಹತ್ತಾರು ವಿದ್ಯಾರ್ಥಿಗಳು ತುಂಬಿ ಹರಿಯುವ ನದಿಯನ್ನು ದಾಟುತ್ತಿದ್ದಾರೆ.ಕಾಲ್ತೋಡು ಘಟನೆ ಬಳಿಕ ಇಲ್ಲಿನ ಜನರ ಆತಂಕ ಇನ್ನಷ್ಟು ಹೆಚ್ಚಿದೆ.

ಹಲವು ಬಾರಿ ಮನವಿ:ಗೋಳಿಹೊಳೆ ಗ್ರಾ.ಪಂ ವ್ಯಾಪ್ತಿಯ ಎಳಜಿತ್,ಸಾತೇರಿ,ಬಾಳೆಗದ್ದೆ ಮದ್ಯೆ ಈ ಹೊಳೆ ಹರಿಯುತ್ತಿದೆ.ಮಳೆಗಾಲದಲ್ಲಿ ತುಂಬಿ ಹರಿಯುವ ಕಾರಣ ನದಿಯ ಸೆಳೆತ ಹೆಚ್ಚಿರುತ್ತದೆ.ಎರಡು ಊರುಗಳ ಸಂಪರ್ಕಕ್ಕಾಗಿ ತಾತ್ಕಾಲಿಕ ಮರದ ದಿಮ್ಮಿಯ ಸೇತುವೆ ನಿರ್ಮಿಸಿಕೊಂಡಿದ್ದಾರೆ.ಒಂದೆರಡು ಬಾರಿ ನೀರಿನಲ್ಲಿ ಕೊಚ್ಚಿ ಹೋಗಿದೆ.ಪ್ರತಿವರ್ಷ ಮಳೆಗಾಲದಲ್ಲಿ ಶಾಲಾ ಮಕ್ಕಳು,ಸ್ಥಳೀಯರು ಆಸ್ಪತ್ರೆಗೆ ಹೋಗಬೇಕಾದರು ಈ ಕಾಲುಸಂಕದ  ಮೇಲೆ ಜೀವ ಕೈಯಲ್ಲಿ ಹಿಡಿದು ಸರ್ಕಸ್ ಮಾಡಬೇಕಾಗಿದೆ.ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಹಲವು ಬಾರಿ ಮನವಿ ನೀಡಿದರು ಸ್ಪಂಧನೆ ದೊರೆತಿಲ್ಲ.ಒಂದೊಮ್ಮೆ ಅವಘಡ ನಡೆದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಗಡೆ ಜಾಗೃತೆ ವಹಿಸಲು ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಅಪಾಯ ಕಟ್ಟಿಟ್ಟ ಬುತ್ತಿ: ಈ ನದಿಯಲ್ಲಿ ಕಳೆದ ವರ್ಷ ಒಂದೆರಡು ಮಕ್ಕಳು ನೀರಿಗೆ ಬಿದ್ದಿದ್ದು ಸ್ಥಳೀಯರ ಪ್ರಯತ್ನದಿಂದ ಬಚಾವಾಗಿದ್ದರು.ಈ ಸೇತುವೆ ಮೂಲಕ ಸಾಗದಿದ್ದರೆ ಹತ್ತು ಕಿ.ಮೀ ಸುತ್ತು ಬಳಸಿ ಬರಬೇಕಾಗಿದೆ.ಹೀಗಾಗಿ ಅಪಾಯ ಇದ್ದರೂ ಕೂಡ ಅನಿವಾರ್ಯವಾಗಿ ಕಾಲುಸಂಕ ಬಳಸಬೇಕಾಗಿದೆ.ಬೈಂದೂರು ಭಾಗದಲ್ಲಿ ಇಂತಹ ಅನೇಕ ಕಾಲು ಸಂಕಗಳಿವೆ.ಸಾಂತೇರಿ ಕಾಲುಸಂಕ ಅತ್ಯಂತ ಅಪಾಯಕಾರಿಯಾಗಿದೆ.ಹೀಗಾಗಿ ಜನಪ್ರತಿನಿಧಿಗಳು,ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾಗಿದೆ.

ಹೇಳಿಕೆ.

ಸಾಂತೇರಿ ಕಾಲುಸಂಕ ಸಮಸ್ಯೆ ಕುರಿತು ಹಲವು ಬಾರಿ ಜನಪ್ರತಿನಿಽಗಳಿಗೆ ಮನವಿ ನೀಡಲಾಗಿದೆ.ಇದುವರೆಗೆ ಮಂಜೂರಾತಿ ದೊರೆತಿಲ್ಲ .ಸರಕಾರ  ಯಾವುದೇ ಅನುದಾನ ಮೀಸಲಿಟ್ಟಿಲ್ಲ.ಈಗಾಗಲೇ ಕಾಲ್ತೋಡು ಘಟನೆಯಿಂದ ಆತಂಕಗೊಂಡಿರುವ ಸಾರ್ವಜನಿಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಾಗಿದೆ.ಅವಘಡ ನಡೆದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಚಿತವಾಗಿ ಸರಕಾರ,ಇಲಾಖೆ ಗಮನಹರಿಸಬೇಕಾಗಿದೆ…ಆನಂದ ಪೂಜಾರಿ ಸ್ಥಳೀಯರು.

News/shirurunews.com

 

Leave a Reply

Your email address will not be published.

ten + thirteen =