ಬೈಂದೂರು: ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನ ಹೇರಂಜಾಲು  ಇದರ ನೂತನ ರಾಜಗೋಪುರ ಸಮರ್ಪಣೆ ಅಂಗವಾಗಿ ಅತಿರುದ್ರ ಮಹಾಯಾಗ,ನೂತನ ಹೊರ ಹೆಬ್ಬಾಗಿಲು, ಧ್ವಜಸ್ತಂಭ ಪ್ರತಿಷ್ಠೆ,ಮಹಾಬಲಿ ಪೀಠ, ಕ್ಷೇತ್ರಪಾಲ,ಸ್ವರ್ಣ ಶಿಖರ ಪ್ರತಿಷ್ಠೆ,ಯಾಗ ಶಾಲೆ ಹಾಗೂ ನೂತನ ಭೋಜನಾಲಯ ಉದ್ಘಾಟನಾ ಸಮಾರಂಭ ಎ.23 ರಿಂದ 27 ರ ವರೆಗೆ ಹೇರಂಜಾಲುವಿನಲ್ಲಿ ನಡೆಯಲಿದೆ. ಶ್ರೀಮತಿ ಶೀಲಾ ಜೆ ಶೆಟ್ಟಿ ಮತ್ತು ಶ್ರೀ ಹೆಚ್.ಜಯಶೀಲ ಶೆಟ್ಟಿ ಘಟಪ್ರಭಾ ದಂಪತಿಗಳ ಸಂಕಲ್ಪದಂತೆ ಅವರ ಮನೆಯವರು ಮತ್ತು ಕುಟುಂಬಸ್ಥರಿಂದ ನಿರ್ಮಿಸಲ್ಪಟ್ಟ ಭವ್ಯವಾದ ಮಹಾಗೋಪುರದ ಉದ್ಘಾಟನೆಯ ಅಂಗವಾಗಿ ನಡೆಯುವ ಧಾರ್ಮಿಕ ಮತ್ತು ಅತಿರುದ್ರ ಮಹಾಯಾಗವೂ ವೇ.ಮೂ.ಶ್ರೀ ಕಟ್ಟೆ ಶಂಕರ ಭಟ್ ನವೀಲುಗೋಣ ಅವರ ಪ್ರಧಾನ ಆಚಾರ್ಯತ್ವದಲ್ಲಿ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮ

ಎ.23 ರಂದು  ಬೆಳಿಗ್ಗೆ  9 ಗಂಟೆಗೆ ಗಣಹೋಮ ಬಳಿಕ ಊರ ಭಕ್ತಾಧಿಗಳಿಂದ ಹೊರ ಕಾಣಿಕೆ ಸಮರ್ಪಣೆ ಸ್ವಾಗತ ಗೋಪುರದಿಂದ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಲಿದೆ.

ಎ.24 ರಂದು  ಬೆಳಿಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ, ಫಲನ್ಯಾಸ, ಪಂಚಗವ್ಯ ಹೋಮ, ಮಧುಪರ್ಕ, ಕಂಕಣ ಬಂಧನ, ಅತಿರುದ್ರ ಯಾಗದ ಪ್ರಧಾನ ಸಂಕಲ್ಪ, ರುದ್ರ ಪಠಣ ಆರಂಭ ಸಂಜೆ 7ಕ್ಕೆ ವಾಸ್ತುರಾಕೋಪ್ನ ಹೋಮ, ಧ್ವಜ, ಕ್ಷೇತ್ರಪಾಲ ಶುದ್ದಿ, ಅಽವಾಸ ನಡೆಯಲಿದೆ.

ಎ. 25 ರಂದು ಬೆಳಿಗ್ಗೆ 8 ಕ್ಕೆ ರುದ್ರ ಪಠಣ, ಧಾರ್ಮಿಕ ವಿಧಿಗಳು, 10.30 ರ ವೃಷಭ ಲಗ್ನದಲ್ಲಿ ಧ್ವಜ ಪ್ರತಿಷ್ಠೆ, ಮಹಾಬಲಿ ಪೀಠ, ಕ್ಷೇತ್ರಪಾಲ, ಶಿಖರ ಪ್ರತಿಷ್ಠೆ ಕಲಾಹೋಮ ಮಹಾಪೂಜೆ. ಮಧ್ಯಾಹ್ನ 2 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7 ಕ್ಕೆ ಶ್ರೀದೇವರಿಗೆ ರಂಗಪೂಜೆ ಕ್ಷೇತ್ರಪಾಲ ಬಲಿ. 108 ಕಲಶ ಸ್ಥಾಪನೆ ನಡೆಯಲಿದೆ.

ಎ.26 ರಂದು ಬೆಳಿಗ್ಗೆ 8 ರಿಂದ ಅತಿರುದ್ರ ಯಾಗದ ರುದ್ರಪಠಣ ’ ಧಾರ್ಮಿಕ ವಿಧಿಗಳು, ಬೆಳಿಗ್ಗೆ 11.32 ರ ವೃಷಭ ಲಗ್ನ ಮುಹೂರ್ತದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಂದ ದೇವಳದ ಮಹಾಗೋಪುರ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ  ಧಾರ್ಮಿಕ ದತ್ತಿ, ಮುಜರಾಯಿ ಹಾಗೂ ಸಾರಿಗೆ ಸಚಿವರಾದ ಆರ್.ರಾಮಲಿಂಗ ರೆಡ್ಡಿ ಅವರಿಂದ ದೇವಳದ ಹೊರ ಹೆಬ್ಬಾಗಿಲು ಸಮರ್ಪಣೆ ನಡೆಯಲಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ  ಲಕ್ಷ್ಮೀ ಹೆಬ್ಬಾಳ್ಳರ್ ಅವರಿಂದ ದೇವಳದ ಧ್ವಜ ಸ್ತಂಭ ಉದ್ಘಾಟನೆಗೊಳ್ಳಲಿದೆ ಮಾಜಿ ಸಚಿವರು ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳೆ ಅವರಿಂದ  ನೂತನ ಯಾಗ ಶಾಲೆ ಸಮರ್ಪಣೆ ಹಾಗೂ  ಮಧ್ಯಾಹ್ನ 2 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 8 ಕ್ಕೆ ಯಾಗ ಶಾಲಾ ಪ್ರವೇಶ, ಯಾಗ ಶಾಲಾ ಶುದ್ಧಿ, ವೇದಿಕೆ ನಿರ್ಮಾಣ ಅಗ್ನಿಜನನ ನಡೆಯಲಿದೆ.

ಎ.27 ರಂದು ಬೆಳಿಗ್ಗೆ 8 ಕ್ಕೆ ರುದ್ರ ಪಠಣ. ಅಗ್ನಿ ಕುಂಡಗಳಲ್ಲಿ ರುದ್ರಹೋಮ, ಅತಿರುದ್ರ ಹೋಮದ ಪೂರ್ಣಾಹುತಿ. ಋತ್ವಿಜರಿಗೆ ಸಂಭಾವನೆ. ಆಶೀರ್ವಚನ, ಪ್ರಸಾದ ವಿತರಣೆ, ಮಧ್ಯಾಹ್ನ 12 ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಬಳಿಕ ಪಿನಾಕ ಹಸ್ತ ವೇದಿಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು  ಪರಮ ಪೂಜ್ಯ ಶ್ರೀ.ಮ.ನಿ. ಪ್ರ.ಸ್ವ. ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳು ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠ ಘಟಪ್ರಭಾ, ಹಾಗೂ ಉತ್ತರಾಧಿಕಾರಿಗಳು ಜಗದ್ಗುರು ಮೂರು ಸಾವಿರ ಮಠ ಹುಬ್ಬಳ್ಳಿ ಮತ್ತು ಜಗದ್ಗುರು ಸಂಸ್ಥಾನ ಮುಂಡರಗಿ, ಗದಗ ಆಶೀರ್ವಚನ ನೀಡಲಿದ್ದಾರೆ.

ಶಿವಮೊಗ್ಗ ಲೋಕಸಭಾ ಸಂಸದ  ಬಿ.ವೈ.ರಾಘವೇಂದ್ರ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ ಮುಂತಾದ ಗಣ್ಯರು ಆಗಮಿಸಲಿದ್ದು ವೇ.ಮೂ.ಶ್ರೀ ಕಟ್ಟಿ ಶಂಕರ ಭಟ್ ನವೀಲುಗೋಣ ಹಾಗೂ  ಸುಬ್ರಮಣ್ಯ ಭಟ್ ವಾಸ್ತು ತಜ್ಞರು, ಗುಂಡಿಬೈಲು ಉಡುಪಿ ಇವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ಸಾಂಸ್ಕ್ರತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎ.25 ರಂದು ಸಂಜೆ 7:30 ಕ್ಕೆ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ಒಂದು ನೃತ್ಯ ಗಾಥೆ ನಡೆಯಲಿದೆ.

ಎ.26 ರಂದು ರಾತ್ರಿ 8 ಗಂಟೆಗೆ  ರಾಜ್ಯ ಪ್ರಶಸ್ತಿ ಪುರಸ್ಕೃತ ಮಂಗಳೂರು ಕುಳಾಯಿ ಕಲಾಕುಂಭ ನಾಟಕ ತಂಡದಿಂದ ಭಕ್ತಿ ಪ್ರಧಾನ ಕನ್ನಡ ನಾಟಕ ” ಪರಮಾತ್ಮ ಪಂಜುರ್ಲಿ ” ನಾಟಕ ಪ್ರದರ್ಶನಗೊಳ್ಳಲಿದೆ.

ಎ.27 ರಂದು ರಾತ್ರಿ 8 ಗಂಟೆಗೆ  ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ಗುಡೇ ಮಹಾಲಿಂಗೇಶ್ವರ ಮಹಾತ್ಮ ಯಕ್ಷಗಾನ ಪ್ರಸಂಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಗೌರವಾಧ್ಯಕ್ಷ ಹೆಚ್.ಜಯಶೀಲ ಶೆಟ್ಟಿ ಘಟಪ್ರಭಾ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮಾನಾಭ ಮೇರ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

2 × 5 =