ಬೈಂದೂರು: ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷೆ ಯೋಜನೆ ಅಗೆದಷ್ಟು ಅನಾಚಾರ ಬೆಳಕಿಗೆ ಬರುತ್ತಿದೆ.ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಟ್ಟು 7 ಕೋಟಿ 35 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ 80% ಶೇಕಡ ಹಣ ಗುತ್ತಿಗೆದಾರರಿಗೆ ಪಾವತಿಯಾಗಿದೆ.ಆದರೆ ಯಾವ ಮನೆಗೂ ಕೂಡ ನಳ್ಳಿ ನೀರು ಬಂದಿಲ್ಲ. ಈ ಕುರಿತು ಸಮಗ್ರ ಮಾಹಿತಿ ತಿಳಿಯಲು ರೈತ ಸಂಘದ ಮುಂದಾಳತ್ವದಲ್ಲಿ ಸಾರ್ವಜನಿಕ ಮಾಹಿತಿ ಸಂವಾದ ಶಿರೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಇದು ಜನಸಾಮಾನ್ಯರ ಜೀವನದ ಪ್ರಶ್ನೆ. ಯಾರ ವಿರುದ್ದ ಅಪಾದನೆಯಲ್ಲ. ಯಾವ ರಾಜಕೀಯ ದುರುದ್ದೇಶವು ಇಲ್ಲಾ ಬದಲಾಗಿ ಬೈಂದೂರು ಕ್ಷೇತ್ರದಲ್ಲಿ 800 ಕೋಟಿಗೂ ಅಧಿಕ ಅನುದಾನ ಕುಡಿಯುವ ನೀರಿಗಾಗಿ ಬಂದಿದೆ.80% ಶೇಕಡಾ ಹಣ ಗುತ್ತಿಗೆದಾರರಿಗೆ ಪಾವತಿಯಾಗಿದೆ.ಆದರೆ ಇದುವರೆಗೆ ಹನಿ ನೀರು ಕೊಟ್ಟಿಲ್ಲ.ಹಾಗಿದ್ದರೆ ಜನರಿಗೆ ನೀರು ಸಿಗುವುದು ಯಾವಾಗ? ಇದರ ಬಗ್ಗೆ ಜನಜಾಗೃತಿ ಮೂಡಿಸಿ ನೀರಿಗಾಗಿ ಹೋರಾಟ ಮಾಡುವುದು ನಮ್ಮ ಉದ್ದೇಶವಾಗಿದೆ.ಯಾವುದೇ ಕಾರಣಕ್ಕೂ ಇದು ಸರಿಯಾಗುವವರೆಗೆ ಬಿಡುಗೆ ಪ್ರಶ್ನೆ ಇಲ್ಲಾ.ಸಮಗ್ರ ದಾಖಲೆ ಪಡೆದು ಲೋಕಾಯುಕ್ತ ತನಿಖೆಗೆ ಆಗ್ರಹಿಸಲಾಗುತ್ತದೆ ಎಂದರು.
ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್ ಮಾತನಾಡಿ ಶಿರೂರಿನಲ್ಲಿ ಎರಡೆರಡು ಬಾರಿ ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ.ಇದುವರೆಗೆ ಯಾವ ಅಧಿಕಾರಿ ಕೂಡ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿಲ್ಲ.ಜೊತೆಗೆ ಕೆಲವು ಕಡೆ ನೂರು ರೂಪಾಯಿ ಯಿಂದ ಸಾವಿರ ರೂಪಾಯಿಯವರೆಗೆ ಗುತ್ತಿಗೆದಾರರು ಲಂಚ ಪಡೆದಿದ್ದಾರೆ.ಶಿರೂರಿಗೆ ಯಾವಾಗ ನೀರು ಕೊಡುತ್ತಾರೆ ಎಂದು ಸರಿಯಾಗಿ ತಿಳಿಸಬೇಕು ಎಂದರು.











ಜಲಜೀವನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು; ಸಂವಾದ ನಡೆಸುವ ವೇಳೆ ಶಿರೂರು ಗ್ರಾಮದ ಬುಕಾರಿ ಕಾಲೋನಿ ಟ್ಯಾಂಕ್ ಬಳಿ ಜಲಜೀವನ್ ಅಧಿಕಾರಿಗಳ ಬಂದಿರುವ ಮಾಹಿತಿ ತಿಳಿದು ದೌಡಾಯಿಸಿದ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಮಾತ್ರವಲ್ಲದೆ ಯೋಜನೆ ಅವ್ಯವಸ್ಥೆ ಬಗ್ಗೆ ತಿಳಿಸಿದಾಗ ಪ್ರತಿಕ್ರಯಿಸಿದ ಸಹಾಯಕ ಇಂಜಿನಿಯರ್ ಗಿರೀಶ್ ನಮ್ಮ ಇಲಾಖೆಯಿಂದ ಈ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರು ಮುಕ್ತವಾಗಿ ನೀಡುತ್ತೇವೆ.ಕಾಮಗಾರಿ ಪಾರದರ್ಶಕವಾಗಿ ನಡೆಯುತ್ತಿದೆ.ಗ್ರಾಮ ಪಂಚಾಯತ್ ಮನೆಗಳಿಗೂ ಮಾಹಿತಿ ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಿರೂರು ಗ್ರಾ.ಪಂ ನಿರ್ಗಮಿತ ಅಧ್ಯಕ್ಷೆ ನಾಗರತ್ನ ಆಚಾರ್ಯ,ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಶ ಶೆಟ್ಟಿ,ಮಾಜಿ ಅಧ್ಯಕ್ಷೆ ಜಿ.ಯು ದಿಲ್‌ಶಾದ್ ಬೇಗಂ,ರಘುರಾಮ ಕೆ.ಪೂಜಾರಿ,ಪಾಲಾಕ್ಷ ಮೇಸ್ತ,ಮುಕ್ತಿ ಅಲ್ತಾಫ್,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಅಜ್ಮಲ್ ಸಾಹೇಬ್ ಶಿರೂರು,ಯೋಗೀಶ್ ಪೂಜಾರಿ ಶಿರೂರು,ಕೋಟಿ ಪೂಜಾರಿ,ಪದ್ಮಾಕ್ಷ ಗೋಳಿಬೇರು ಮೊದಲಾದವರು ಹಾಜರಿದ್ದರು.
ವರದಿ/ಚಿತ್ರ: ಗಿರಿ ಶಿರೂರು