ಶಿರೂರು: ಹತ್ತಾರು ಸಮಾಜಮುಖಿ ಕಾರ್ಯದ ಮೂಲಕ ಗುರುತಿಸಿಕೊಂಡ ಶಿರೂರಿನಲ್ಲಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ದಾನಿಗಳ ನೆರವಿನಿಂದ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸುವ ಮೂಲಕ ಸಾಮರಸ್ಯ ಬಾಂಧವ್ಯ ಮೆರೆದಿದ್ದಾರೆ.
ಶಿರೂರಿನ ಮುದ್ರಮಕ್ಕಿ ಮಹಾಸತಿ ದೇವಸ್ಥಾನ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮನೆಗಳಿರುವ ಈ ಭಾಗದಲ್ಲಿ ಸಮರ್ಪಕ ರಸ್ತೆಗಳಿರಲಿಲ್ಲ.ರೈಲ್ವೆ ಹಳಿಯ ಪಕ್ಕದಲ್ಲಿರುವ ಕಾರಣ ತಾಂತ್ರಿಕ ಸಮಸ್ಯೆ ಮತ್ತು ಸರಕಾರದ ಅನುದಾನ ಕೂಡ ಬಳಸುವ ಅವಕಾಶ ಇರಲಿಲ್ಲ. ಕಳೆದ ಹಲವು ವರ್ಷಗಳಿಂದ ನಿರಂತರ ಪ್ರಯತ್ನದಲ್ಲಿರುವ ಇಲ್ಲಿನ ಸ್ಥಳೀಯರು,ಶಿರೂರು ಅಸೋಸಿಯೇಷನ್ ಹಾಗೂ ದಾನಿಗಳ ಮೂಲಕ ಮನವಿ ನೀಡಿದ್ದರು.ಈ ಬಗ್ಗೆ ಕಾರ್ಯಪ್ರವೃತ್ತರಾದ ಶಿರೂರು ಅಸೋಸಿಯೇಷನ್ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ 8 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದೆ.ಇದರಿಂದಾಗಿ ಬಹುವರ್ಷದ ಬೇಡಿಕೆ ಈಡೇರಿರುವ ಜೊತೆಗೆ ಪರಸ್ಪರ ಸಾಮರಸ್ಯದ ಬಾಂಧವ್ಯ ಬೆಳೆಸಿದೆ.
ರಸ್ತೆ ಕಾಮಗಾರಿ ಅನುಮತಿಗಾಗಿ ಎರಡು ವರ್ಷದ ಪ್ರಯತ್ನ: ರಸ್ತೆ ನಿರ್ಮಾಣಕ್ಕೆ ದಾನಿಗಳು ಮುಂದಾದರು ಸಹ ರೈಲ್ವೆ ಮಾರ್ಗ ಇರುವ ಕಾರಣ ಅನುಮತಿ ದೊರೆತಿರಲಿಲ್ಲ.ಹೀಗಾಗಿ ಈ ಭಾಗದ ಗ್ರಾ.ಪಂ ಸದಸ್ಯರು,ಅಸೋಸಿಯೇಷನ್ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಸ್ಥಳೀಯ ಮುಂದಾಳುಗಳು ನಿರಂತರವಾಗಿ ಎರಡು ವರ್ಷದ ಪ್ರಯತ್ನದ ಮೂಲಕ ರೈಲ್ವೆ ಇಲಾಖೆ ನಿರಪೇಕ್ಷಣಾ ಪತ್ರ ಪಡೆಯಲಾಯಿತು.ಬಳಿಕ ರೈಲ್ವೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅನುಮತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೃಷ್ಣ ಬಿಲ್ಲವ ದುಬೈ ಸದಸ್ಯರು ಶಿರೂರು ಅಸೋಸಿಯೇಷನ್,ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ,ಗ್ರಾ.ಪಂ ಸದಸ್ಯ ಲಿಂಗಪ್ಪ ಮೇಸ್ತ,ಅರುಣ್ ಕುಮಾರ್ ಶಿರೂರು,ಎಚ್.ಎಸ್.ಸಿದ್ದಿಕ್ ,ರವೀಂದ್ರ ಶೆಟ್ಟಿ ಪಟೇಲ್,ಮಾಮ್ದು ಇಬ್ರಾಹಿಂ,ಇರ್ಫಾನ್,ಫಾರೂಕ್ ಮೊದಲಾದವರು ಹಾಜರಿದ್ದರು.
ವರದಿ/ಗಿರಿ ಶಿರೂರು