ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲೆಯ ವಿವಿಧ ಪ್ರಾಕಾರಗಳನ್ನು ಕಲಿಸುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಸುರಭಿ, ವಿದ್ಯಾರ್ಥಿಗಳನ್ನು ಸತ್ಪ್ರಪ್ರಜೆಗಳನ್ನಾಗಿ ರೂಪಿಸುವ ಪುಣ್ಯದಕಾರ್ಯದಲ್ಲಿ ತೊಡಗಿದೆ. ಕಲೆ ತನ್ನ ನೆಲೆ ಕಂಡುಕೊಳ್ಳಬೇಕಾದರೇ ಅವುಗಳ ಬಗೆಗಿನ ಅರಿವು ಅಗತ್ಯ. ನಮ್ಮ ಆಸಕ್ತಿಗಳೇ ಸಾಂಸ್ಕೃತಿಕ ಸಿರಿವಂತಿಗೆಗೆ ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಇಲ್ಲಿನ ಶ್ರೀ ಶಾರದಾ ವೇದಿಕೆಯಲ್ಲಿ ಶನಿವಾರ ಸುರಭಿ ಬೈಂದೂರು ಇದರ ರಜತ ವರ್ಷದ ಪ್ರಯುಕ್ತ ನಡೆದ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುರಾಜ ಗಂಟಿಹೊಳೆ ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಶಿಕ್ಷಣವು ವ್ಯಕ್ತಿಯಲ್ಲಿ ಸಂಸ್ಕಾರ ಹಾಗೂ ಸ್ವಾಭಿಮಾನವನ್ನು ಬೆಳೆಸುತ್ತದೆ. ಶಿಕ್ಷಣದ ಜೊತೆಗೆ ಕಲಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆತ ಮತ್ತಷ್ಟು ಕ್ರೀಯಾಶೀಲನಾಗುತ್ತಾನೆ. ಶಿಕ್ಷಣ ಸಂಸ್ಥೆಗಳು ಬುದ್ಧಿವಂತರನ್ನು ತಯಾರು ಮಾಡಬಹುದು. ಪ್ರಪಂಚದಲ್ಲಿ ಬುದ್ದಿವಂತರು ಅನೇಕರಿರಬಹುದು. ಆದರೆ ನಮಗೆ ಹೃದಯವಂತರು ಬೇಕು. ರಂಗ ಚಟುವಟಿಕೆಯಿಂದ ಹೃದಯ ಅರಳುತ್ತದೆ. ಕಲೆ, ಶಿಕ್ಷಣ ಎಲ್ಲದರ ಮೂಲ ಉದ್ದೇಶ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವುದಾಗಿದೆ ಎಂದರು.

ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಶುಭಾಶಂಸನೆಗೈದರು. ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಗೋವಿಂದ ಎಂ. ಆಶಯ ನುಡಿಗಳನ್ನಾಡಿದರು. ಉದ್ಯಮಿ ರಾಜು ಪೂಜಾರಿ ಗರ್ಜಿನಹಿತ್ಲು, ರಂಗಕರ್ಮಿ ಸತ್ಯನಾ ಕೊಡೇರಿ, ಸುರಭಿ ಅಧ್ಯಕ್ಷ ಆನಂದ ಮದ್ದೋಡಿ, ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು. ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳ ವಿಜೇತರಿಗೆÀ ಬಹುಮಾನ ವಿತರಿಸಲಾಯಿತು. ಸುನಿಲ್ ಎಚ್. ಜಿ. ಸ್ವಾಗತಿಸಿ, ಸುರಭಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ವಂದಿಸಿದರು. ನಿರ್ದೇಶಕ ಸುಧಾಕರ ಪಿ. ನಿರೂಪಿಸಿದರು. ನಂತರ ಪ್ರಥಮ ಪ್ರಶಸ್ತಿ ಪುರಸ್ಕೃತ ಕ್ರಾನಿಕಲ್ ಆಫ್ ಇಂಡಿಯಾ ಬೆಂಗಳೂರು ತಂಡದ ಗಣೇಶ ಮಂದಾರ್ತಿ ನಿರ್ದೇಶನದ ಶಿವೋಹಂ ನಾಟಕ ಮರು ಪ್ರದರ್ಶನಗೊಂಡಿತು.