ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಲು ಆಗ್ರಹಿಸಿ ಬೈಂದೂರು ರೈತ ಸಂಘದ ನೇತ್ರತ್ವದಲ್ಲಿ ಬೈಂದೂರಿನ ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿದ್ದ ಅನಿರ್ಧಿಷ್ಟಾವಧಿ ಧರಣಿ 54ನೇ ದಿನಕ್ಕೆ ಕಾಲಿಟ್ಟಿದೆ.ಗೋಳಿಬೇರು ಭಾಗದ ರೈತರು ಹಾಗೂ ರೈತ ಸಂಘದ ಸದಸ್ಯರಾದ ಪದ್ಮಾಕ್ಷ್ಮ ಹಾಗೂ ಹೆರಿಯ ಪೂಜಾರಿ ನೇತ್ರತ್ವದಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ತಾಲೂಕು ರೈತ ಸಂಘದ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರಿಸಿರುವುದರ ಪರಿಣಾಮ ಸಾವಿರಾರು ರೈತರ ಬದುಕು ಕಣ್ಣೀರಿನಿಂದ ಕೈ ತೊಳೆಯುವಂತಾಗಿದೆ.ಹಲವು ಸೌಲಭ್ಯಗಳಿಂದ ವಂಚಿತರಾಗಿ ಆತಂತ್ರ ಬದುಕು ಸಾಗಿಸುವಂತಾಗಿದೆ.ಎರಡು ತಿಂಗಳಿಂದ ರೈತರು ನಿರಂತರ ಹೋರಾಟ ನಡೆಸುತ್ತಿದ್ದು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು ಎಲ್ಲಾ ಜನಪ್ರತಿನಿಧಿಗಳು, ಸಚಿವರು,ನಾಯಕರ ಮುಂದಾಳತ್ವದಲ್ಲಿ ನ್ಯಾಯ ಒದಗಿಸಿಕೊಡಬೇಕಿದೆ.
ಈಗಾಗಲೇ ರೈತರ ಕಾನೂನು ಹೋರಾಟದ ಪರಿಣಾಮ ಸಚಿವರ ಸಹಕಾರದಲ್ಲಿ ರಾಜ್ಯ ಚುನಾವಣಾ ಆಯೋಗ ಪಟ್ಟಣ ಪಂಚಾಯತ್ ಚುನಾವಣೆ ಮುಂದೂಡಿದೆ.ಆದರೆ ಕೆಲವು ಮುಖಂಡರು ರೈತರ ಹೋರಾಟ ಹತ್ತಿಕ್ಕಲು ತೆರೆಮರೆಯ ಷಡ್ಯಂತ್ರ ನಡೆಸುತ್ತಿದ್ದಾರೆ.ರೈತರ ಧರಣಿಗೆ ಒಂದು ದಿನವೂ ಭಾಗವಹಿಸದೆ ರೈತರ ಹೋರಾಟಕ್ಕೆ ಹಿನ್ನೆಡೆ ಮಾಡುವ ಹುನ್ನಾರ ರೈತರನ್ನು ರೊಚ್ಚಿಗೆಬ್ಬಿಸುತ್ತಿದೆ.ಅಂತಹ ನಾಯಕರ ನಾಟಕ ಬಯಲಾಗಲಿದೆ.ರೈತರಿಗೆ ಅನ್ಯಾಯ ಮಾಡುವ ಪ್ರಯತ್ನ ಸಲ್ಲದು 60 ದಿನದಲ್ಲಿ ನ್ಯಾಯ ದೊರೆಯದಿದ್ದರೆ ಅಮರಣಾಂತ ಉಪವಾಸ ಕೈಗೊಳ್ಳಲು ಸಿದ್ದತೆ ನಡೆಯುತ್ತಿದೆ ಎಂದರು.
ಶಾಸಕರ ಆಗಮನಕ್ಕೆ ಆಗ್ರಹ: ರೈತ ಮುಖಂಡ ವೀರಭದ್ರ ಗಾಣಿಗ ಮಾತನಾಡಿ ಈಗಾಗಲೇ ಬೈಂದೂರು ಭಾಗದ ರೈತರು ಸಾವಿರಾರು ಸಂಖ್ಯೆಯಲ್ಲಿ ಬೀದಿಗೆ ಬಂದಿದ್ದಾರೆ.ಎರಡು ತಿಂಗಳಿನಿಂದ ಹೋರಾಟ ನಡೆಯುತ್ತಿದೆ ಪಕ್ಷಾತೀತ ಹೋರಾಟ ಎಲ್ಲಾ ಪಕ್ಷದ ಮುಖಂಡರು ಭಾಗವಹಿಸುತ್ತಿದ್ದಾರೆ.ಬæೖಂದೂರು ಶಾಸಕರು ಈಗಾಗಲೇ ಮೂರು ಬಾರಿ ಬಂದಿದ್ದಾರೆ.ಆದರೆ ಕಳೆದ 30 ದಿನದಿಂದ ವೇದಿಕೆಗೆ ಬಂದಿಲ್ಲ. ಇಷ್ಟುದಿನದಲ್ಲಿ ಸರಕಾರದಲ್ಲಿ ಯಾವ ಪ್ರಕ್ರಿಯೆ ನಡೆಯುತ್ತಿದೆ.ರೈತರ ಹೋರಾಟಕ್ಕೆ ಅಧಿಕಾರಿಗಳು ಎನು ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಾ.ಹೀಗಾಗಿ ಕ್ಷೇತ್ರದ ಶಾಸಕರು ರೈತರಿಗೆ ಮತ್ತು ರೈತರ ನೋವಿಗೆ ಸ್ಪಂಧಿಸಬೇಕಿದೆ.ರೈತರ ವೇದಿಕೆಗೆ ಬಂದು ಗ್ರಾಮೀಣ ಭಾಗದ ಜನರಿಗೆ ಸರಕಾರದ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮಾಹಿತಿ ನೀಡಬೇಕೆನ್ನುವುದು ರೈತರ ಆಗ್ರಹವಾಗಿದೆ ಎಂದರು.