ಬೈಂದೂರು: ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರು ಇವರ 30ರ ಸಂಭ್ರಮ 2025ರ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪತ್ರಿಕಾ ಗೋಷ್ಟಿ ಬುಧವಾರ ಸಂಜೆ ಬೈಂದೂರು ಬಂಟರ ಸಮುದಾಯ ಭವನದಲ್ಲಿ ನಡೆಯಿತು.

ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರು ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಸಂಘವು ತಾನು ಹೊಂದಿದ್ದ ಸಾಮಾಜಿಕ ಗುರಿಯನ್ನು ನಿರೀಕ್ಷಿತ ಪ್ರಮಾಣದಲ್ಲಿ ತಲುಪಿದೆ ಎಂಬ ಬಗ್ಗೆ ನನಗೆ ಅಭಿಮಾನವಿದೆ, ಸಂತೃಪ್ತಿಯಿದೆ. ಸಮುದಾಯದೊಳಗಿನ ಉದಾರ ಮನಸ್ಸಿನ ಉಳ್ಳವರಿಂದ ದೇಣಿಗೆಯ ರೂಪದಲ್ಲಿ ಆರ್ಥಿಕ ನೆರವು ಪಡೆದು ಇಲ್ಲದವರಿಗೆ ನೆರವಾಗುವ ಹಂತದಲ್ಲಿ ಸಂಘವು ನಿರ್ವಹಿಸಿರುವ ಕೆಲಸಗಳ ಬಗ್ಗೆ ಆತ್ಮತೃಪ್ತಿಯಿದೆ. ಎಲ್ಲಕ್ಕಿಂದ ಮುಖ್ಯವಾಗಿ ಸಂಘವು ತನ್ನಲ್ಲಿರುವ ಮಿತ ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಬಡ ಕುಟುಂಬಗಳ ಆರೋಗ್ಯ ಸಮಸ್ಯೆಗಳಿಗೆ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ, ವಿಶೇಷ ಚೇತನರ ನಿರೀಕ್ಷೆಗಳಿಗೆ ಬಹುಮುಖಿಯಾಗಿ ಸ್ಪಂದಿಸಿದೆ. ಸಮುದಾಯದ ಹತ್ತಾರು ಮಂದಿ ಹಿರಿಯ-ಕಿರಿಯ ಸಾಧಕರನ್ನು ಪ್ರಶಸ್ತಿ ಸನ್ಮಾನಗಳೊಂದಿಗೆ ಗೌರವಿಸಲಾಗಿದೆ. 30ನೇ ವರ್ಷದ ಸಂಭ್ರಮದ ನಮ್ಮ ಕಾರ್ಯ ನಿರ್ವಹಣೆಯ ಅವಧಿ ಹಲವು ಬಗೆಯ ಸವಾಲುಗಳಿಗೆ ಮುಖಾಮುಖಿಯಾದದ್ದು. ಸಂಘದ ಚಟುವಟಿಕೆಗಳನ್ನು ರಚನಾತ್ಮಕವಾಗಿ ಕಟ್ಟುವುದು ಒಂದು ವಿಧದ ಗುಣಾತ್ಮಕ ಸವಲಾಗಿ ಪರಿಣಮಿಸಿತು. ಈ ನಡುವೆಯೂ ಸಮುದಾಯ ಭಾಂದವರ, ದಾನಿಗಳ ನೆರವು ಮತ್ತು ಮಾರ್ಗದರ್ಶನದ ಪರಿಣಾಮವಾಗಿ 30 ನೇ ವರ್ಷದ ಸಂಭ್ರಮದ ಅವಧಿಯಲ್ಲಿ ಒಂದಿಷ್ಟು ಶೈಕ್ಷಣಿಕ, ಸಮಾಜಮುಖಿ ಹಾಗೂ ಪರಿಸರ ಕೇಂದ್ರಿತ ಕೆಲಸಗಳನ್ನು ನಿರ್ವಹಿಸಲು, ಅಶಕ್ತರಿಗೆ ಹಾಗೂ ಅವಕಾಶಗಳಿಂದ ವಂಚಿತರಾದವರಿಗೆ ಆರ್ಥಿಕ ನೆರವು ನೀಡಲು ಸಾಧ್ಯವಾಯಿತು ಎಂದರು.

ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರು ಉಪಾಧ್ಯಕ್ಷ ಹಾಗೂ 30ರ ಸಂಭ್ರಮದ ಸಂಚಾಲಕ ಜಗದೀಶ್ ಶೆಟ್ಟಿ ಮಾತನಾಡಿ 30ನೇ ವರ್ಷದ ಸಂಭ್ರಮದ ವಿವಿಧ ಸೇವಾ ಚಟುವಟಿಕೆಗಳು ಮತ್ತು ವಿಸ್ತರಣಾ ಕಾರ್ಯಕ್ರಮಗಳಿಗೆ ದೊಡ್ಡ ಮೊತ್ತದ ದೇಣಿಗೆ ನೀಡಿ ಸಹಕರಿಸಿದ ಎಲ್ಲಾ ಮಹಾದಾನಿಗಳು, ಗೌರವ ಮಹಾಪೋಷಕರು, ಮಹಾಪೋಷಕರು, ಪೋಷಕರು ಹಾಗೂ ಎಲ್ಲಾ ದಾನಿಗಳ ನೆರವನ್ನು ಅತ್ಯಂತ ಗೌರವ ಮತ್ತು ಅಭಿಮಾನಗಳೊಂದಿಗೆ ನೆನಪಿಸಿ ಕೊಳ್ಳುತ್ತಿದ್ದೇನೆ. ಇವರೆಲ್ಲರ ಉನ್ನತ ಕೊಡುಗೆಯ ಪರಿಣಾಮವಾಗಿಯೇ ಚಾರಿತ್ರಿಕ ಮಹತ್ವದ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗಿದೆ. ಈ ಅವಽಯಲ್ಲಿ ನನ್ನೊಂದಿಗೆ ವಿವಿಧ ಹಂತಗಳಲ್ಲಿ ಸಹಕರಿಸಿ, ಕೈ ಜೋಡಿಸಿದ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳ ನೆರವು ಮತ್ತು ಶ್ರಮವನ್ನು ವಿಶೇಷವಾಗಿ ನೆನಪಿಸಿಕೊಳ್ಳುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ಸಂಚಾಲಕ ವಸಂತ ಹೆಗ್ಡೆ ಅರೆಶಿರೂರು, ಜೊತೆ ಕಾರ್ಯದರ್ಶಿ ಜಯರಾಮ ಶೆಟ್ಟಿ ಗಂಟಿಹೊಳೆ, ಸಂಘಟನಾ ಕಾರ್ಯದರ್ಶಿ ಸಂತೋಷ ಕುಮಾರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಬ್ಯಾಂಡದರಮನೆ ಉಪ್ಪುಂದ,  ಶ್ಯಾಮಸುಂದರ್ ಶೆಟ್ಟಿ ನಾಕಟ್ಟೆ, ಸತೀಶ್ ಶೆಟ್ಟಿ ಸೂಕುಂದ, ಅಣ್ಣಪ್ಪ ಶೆಟ್ಟಿ ಕಾಲ್ತೋಡು, ಶರತ್ ಶೆಟ್ಟಿ ಉಪ್ಪುಂದ, ಉದಯ್  ಶೆಟ್ಟಿ ಉಪ್ಪುಂದ, ಭರತ್ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.

ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರು 30ರ ಸಂಭ್ರಮದ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಗಾಯಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಂಟರಯಾನೆ ನಾಡವರ ಸಂಘ (ರಿ.) ಬೈಂದೂರು ಪ್ರಧಾನ ಕಾರ್ಯದರ್ಶಿ ನಿತಿನ್ ಬಿ ಶೆಟ್ಟಿ ವಂದಿಸಿದರು.

ವರದಿ/ಚಿತ್ರ: ಶಿರೂರು ಡಾಟ್ ಕಾಮ್..

Leave a Reply

Your email address will not be published. Required fields are marked *

three − 1 =