ಬೈಂದೂರು: ಧಾರ್ಮಿಕ ಮುಖಂಡರು,ಜಿಲ್ಲೆಯ ಹಿರಿಯ ಕಂಬಳದ ಮುತ್ಸದಿ,ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಯಡ್ತರೆ ಇದರ ನಿರ್ದೇಶಕರಾದ ವೆಂಕಟ ಪೂಜಾರಿ ಸಸಿಹಿತ್ಲು ಬುಧವಾರ ಮುಂಜಾನೆ ನಿಧನರಾದರು,ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರ ಪಾರ್ಥಿವ ಶರೀರ ಗುರುವಾರ ಬೆಳಿಗ್ಗೆ 8 ಗಂಟೆಗೆ ವಿದಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಮೃತರು ಪತ್ನಿ,ಎರಡು ಗಂಡು,ಒಂದು ಹೆಣ್ಣು ,ಕುಟುಂಬದವರನ್ನು ಹಾಗೂ ಕಂಬಳದ ಅಭಿಮಾನಿಗಳನ್ನು ಅಗಲಿದ್ದಾರೆ.
ಕಂಬಳ – ಕ್ರೀಡಾ ಪ್ರೀತಿ; ಬೈಂದೂರು ಭಾಗದಲ್ಲಿ ಕಂಬಳ ಕ್ರೀಡೆಯಲ್ಲಿ ವೆಂಕಟ ಪೂಜಾರಿ ಅವರಿಗೆ ಸರಿಸಾಟಿ ತೊಡಗಿಸಿಕೊಂಡವರಿಲ್ಲ. ಅವರ ಪ್ರೀತಿಯ ಕೋಣಗಳು ಸ್ಪರ್ಧೆಗಿಳಿಸಿದರೇ ಗೆಲುವು ಸಾಸದೇ ಕಂಬಳಗದ್ದೆಯ ಅಂಚು ತಲುಪಿದ್ದು ಅಪರೂಪ. ಬಾರ್ಕೂರು ಕಂಬಳದಲ್ಲಿ ಚಿನ್ನಗೆದ್ದ ಹೆಗ್ಗಳಿಕೆ, ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಹಲವು ಸಾಂಪ್ರದಾಯಿಕ ಹಾಗೂ ಕ್ರೀಡಾ ಕಂಬಳಗಳಲ್ಲಿ ಭಾಗವಹಿಸಿದ ಹಿರಿಮೆ ಇವರದ್ದು ಸ್ವತಃ ಕ್ರೀಡಾಪಟುವಾದ ವೆಂಕಟ ಪೂಜಾರಿ ಅವರು ಕಬಡ್ಡಿ ಪಂದ್ಯಾಟದಲ್ಲಿಯೂ ಮೇಲುಗೈ
ಸಾಧಿಸಿದವರು. ಅವಿಭಕ್ತ ಕುಟುಂಬ; ಬೈಂದೂರಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕಂಬಳ ಹಾಗೂ ಕ್ರೀಡಾ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ವೆಂಕಟ ಪೂಜಾರಿ ಅವರು ಕಳವಾಡಿಯ ಸಸಿಹಿತ್ತು ಎಂಬ ದೊಡ್ಡ ಕುಟುಂಬದವರು. ಆಧುನಿಕತೆಯ ವಿಭಕ್ತ ಕುಟುಂಬ ಭರಾಟೆಯ ನಡುವೆಯೂ ಇಂದಿಗೂ ಅವಿಭಕ್ತ ಕುಟುಂಬದಲ್ಲಿದ್ದು ಉದ್ಯಮದ ನಡುವೆಯೂ ಕೃಷಿ ಕಾರ್ಯವನ್ನು ಇಂದಿಗೂ ಪ್ರೀತಿಯಿಂದಲೇ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂಬುದು ಅವರ ಕೃಷಿಯ ಬಗೆಗಿನ ಅವರ ಪ್ರೀತಿ ಹಾಗೂ ಅವರ ಯಜಮಾನಿಕೆಯ ಬಗೆಗೆ ಅವರ ಕುಟುಂಬಿಕರಿಗಿರುವ ಪ್ರೀತಿ ಎರಡನ್ನೂ ಸೂಚಿಸುತ್ತದೆ. ಆ ಸಂಮೃದ್ಧತೆಯನ್ನು ಅವರ ಮನೆಯ ಮುಂದಿನ ಭತ್ತದ ತಿರಿಯೇ ಸೂಚಿಸುತ್ತದೆ.
ಸಾಮಾಜಿಕ – ಸಹಕಾರಿ ರಂಗ: ಯವಕರಾಗಿರವಾಗಲೇ ಸಾಮಾಜಿಕ ರಂಗದಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದ ವೆಂಕಟ ಪೂಜಾರಿ ಅವರು ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಬೈಂದೂರಿನಲ್ಲಿ ನಡೆಸಿದ 217ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷರಾಗಿ, ಬೈಂದೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ, ಹೀಗೆ ಹತ್ತಾರು ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.ರೈತರು ಹಾಗೂ ಗ್ರಾಮಸ್ಥರಿಗೆ ಕಸ್ತೂರಿ ರಂಗನ್ ವಿರುದ್ಧದ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದರು.
ನುಡಿದಂತೆ ನಡೆ; ನುಡಿದಂತೆ ನಡೆಯುವ ವ್ಯಕ್ತಿತ್ವ ವ್ಯವಸಾಯ, ತೋಟಗಾರಿಕೆ, ಹೈನುಗಾರಿಕೆ, ಉದ್ಯಮದ ಜೊತೆಯಲ್ಲಿಯೇ ಬೈಂದೂರು ಭಾಗದ ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಂದಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನರ ನಡುವೆಯೇ ಜನಸಾಮಾನ್ಯನಂತೆ ಬೆರೆತು ಅವರ ಸುಖದುಖಃಗಳಲ್ಲಿ ಭಾಗಿಯಾಗಿ, ತನ್ನೆಲ್ಲಾ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ನಾಯಕ ವೆಂಕಟ ಪೂಜಾರಿ.
ಗಣ್ಯರ ಸಂತಾಪ: ಕಂಬಳದ ದಿಗ್ಗಜ ವೆಂಕಟ ಪೂಜಾರಿ ಸಸಿಹಿತ್ಲು ಆವರ ನಿಧನಕ್ಕೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಬೈ.ವ್ಯ.ಸೇ.ಸಸಂಘದ ಅಧ್ಯಕ್ಷ ಟಿ.ನಾರಾಯಣ ಹೆಗ್ಡೆ ಹಾಗೂ ನಿರ್ದೇಶಕರು,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದರು.