ಶಿರೂರು: ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾದ ಗ್ರಾಮಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದು ಸಾರ್ವಜನಿಕರಿಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿರೂರು ಗ್ರಾಮಸಭೆಯಲ್ಲಿ ನಡೆದಿದೆ.
ಶಿರೂರು ಗ್ರಾಮಸಭೆ ಶನಿವಾರ 11 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಿದ್ದು 22 ಅಧಿಕಾರಿಗಳು ಹಾಜರಾಗಬೇಕಾದ ಸಭೆಯಲ್ಲಿ ಕೇವಲ 10 ಜನ ಅಧಿಕಾರಿಗಳು ಮಾತ್ರ ಹಾಜರಾಗಿದ್ದಾರೆ.ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪದೇ ಪದೇ ಗ್ರಾಮಸಭೆ ಕಾಟಾಚಾರದ ಸಭೆಯಾಗುತ್ತಿದೆ.ಹೀಗಾಗಿ ಸಭೆಗೆ ಬಾರದ ಅಧಿಕಾರಿಗಳ ನಡೆಯನ್ನು ಗ್ರಾಮ ಪಂಚಾಯತ್ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು ಮತ್ತು ಈ ಬಗ್ಗೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು.ಇನ್ನುಳಿದಂತೆ ಗ್ರಾಮದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಶಿರೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳೆ ಇಲ್ಲಾ; ಅತೀ ದೊಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿ ಹೊಂದಿರುವ ಶಿರೂರಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲಾ. ಪ್ರತಿದಿನ ಇಲ್ಲಿಗೆ ನೂರಾರು ರೋಗಿಗಳು ಚಿಕಿತ್ಸೆಗಾಗಿ ಬಂದರೆ ಶಿರೂರು ಸರಕಾರಿ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡಿದೆ.ದಾನಿಗಳ ಸಹಕಾರವಿದ್ದರು ಕೂಡ ಇಲಾಖೆಯ ಬೇಜವಬ್ದಾರಿ ಸಲ್ಲದು ಎಂದು ಗ್ರಾ.ಪಂ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಹಾಗೂ ಸಾರ್ವಜನಿಕರು ಹೇಳಿದರು.
ನೀರ್‍ಗದ್ದೆ ಅಂಗನವಾಡಿ ಶೀಘ್ರ ನಿರ್ಮಾಣವಾಗಬೇಕು: ಶಿರೂರು ಗ್ರಾಮದ ನೀರ್‍ಗದ್ದೆ ಬಳಿ ಈ ಹಿಂದೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು ಈಗ ಸರಕಾರದಿಂದ ಜಾಗ ಮಂಜೂರಾಗಿದೆ.ಆದರೆ ಇಲಾಖೆ ಇದುವರೆಗೆ ಅಂಗನವಾಡಿ ಕಟ್ಟಡ ನಿರ್ಮಾಣವಾಗಿಲ್ಲ.ಹೀಗಾಗಿ ಇಲಾಖೆ ಈ ಬಗ್ಗೆ ಶೀಘ್ರವಾಗಿ ಕಟ್ಟಡ ನಿರ್ಮಾಣವಾಗಬೇಕು ಎಂದು ಗ್ರಾ.ಪಂ ಸದಸ್ಯ ಉದಯ ಪೂಜಾರಿ ಮೈದಿನಪುರ ಆಗ್ರಹಿಸಿದರು.
ಮೆಸ್ಕಾಂ ಇಲಾಖೆ ಸ್ವಿಚ್ ಆಫ್: ಗ್ರಾ.ಪಂ ಸದಸ್ಯರಾದ ಮುಕ್ರಿ ಅಲ್ತಾಫ್,ಮಹ್ಮದ್ ಗೌಸ್,ಗಣಪತಿ ಗಾಣಿಗ,ಯಾಶೀನ್ ಕೆಸರಕೋಡಿ ಮುಂತಾದವರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಣ್ಣ ಕಂಬ ಬಿದ್ದರು ಮೂರು ದಿನ ಪವರ್ ಕಟ್ ಮಾಡಲಾಗುತ್ತದೆ.ಪ್ರತಿದಿನ ಶಿರೂರು ಭಾಗದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಸಹಜವಾಗಿ ಬಿಟ್ಟಿದೆ.ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ.ಹೀಗಾಗಿ ಮೆಸ್ಕಾಂ ವಿರುದ್ದ ಗ್ರಾಮಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ,ನೋಡೆಲ್ ಅಧಿಕಾರಿ ಗಾಯತ್ರಿದೇವಿ,ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.
ಗ್ರಾ.ಪಂ ಕಾರ್ಯದರ್ಶಿ ಮುಕ್ತಾ ನಾಯ್ಕ ಸ್ವಾಗತಿಸಿ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.ಗ್ರಾ.ಪಂ ಸಿಬ್ಬಂದಿ ಶಂಕರ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.
ವರದಿ/ಗಿರಿ ಶಿರೂರು