ಭಟ್ಕಳ: ಲೋಕಕಲ್ಯಾಣಾರ್ಥವಾಗಿ ರಂಜನ್ ಗ್ಯಾಸ್ ಏಜೆನ್ಸಿಯ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ.26 ರಂದು ವಿಶ್ವ ಪ್ರಸಿದ್ಧ ಮಹಾಶಿವನ ತಾಣ ಮುರ್ಡೇಶ್ವರಕ್ಕೆ 15ನೇ ವರ್ಷದ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೊರ್ಚಾದ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ ಹೇಳಿದರು.ಭಟ್ಕಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು, ಫೆ 26ರಂದು ನಸುಕಿನ ವೇಳೆ 04.05ಕ್ಕೆ ಇಲ್ಲಿನ ಮೂಡಭಟ್ಕಳ ಚೋಳೇಶ್ವರ ದೇವಸ್ಥಾನದಿಂದ ಪಾದಯಾತ್ರೆಯನ್ನು ಆರಂಭಿಸಲಾಗುತ್ತಿದ್ದು, 7;30ಕ್ಕೆ ಮುರುಡೇಶ್ವರ ತಲುಪಲಿದೆ. ಪಾದಯಾತ್ರೆಯು ಸರಿಸುಮಾರು 17ಕಿಮೀ. ಕ್ರಮಿಸಲಿದ್ದು, ತಾಲೂಕಿನ ವಿವಿಧ ಭಾಗಗಳಾದ ಬೈಂದೂರು, ಶಿರೂರುಗಳಿಂದ ಸುಮಾರು 12 ಸಾವಿರಕ್ಕೂ ಅಧಿಕ ಭಕ್ತರು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.ಯಾತ್ರೆಯುದ್ಧಕ್ಕೂ ಭಕ್ತರಿಗೆ ಹಣ್ಣು, ಪಾನೀಯವನ್ನು ಒದಗಿಸಲಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಅಂಬುಲೆನ್ಸ್ ವ್ಯವಸ್ಥೆ, ಮೊಬೈಲ್ ಶೌಚಗ್ರಹದ ವ್ಯವಸ್ಥೆಯನ್ನೂ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೂ ಅಲ್ಲಿಯೇ ಎಲ್ಲರಿಗೂ ಲಘು ಉಪಹಾರವನ್ನು ನೀಡಲಾಗುತ್ತದೆ. ಭಕ್ತರು ಭಟ್ಕಳಕ್ಕೆ ವಾಪಸ್ಸಾಗಲು 25 ಬಸ್ಸಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಮಹಿಳೆಯರು ಆಧಾರ ಕಾರ್ಡ ತರಬೇಕು ಎಂದ ಅವರು ಈ ಪಾದಯಾತ್ರೆಯನ್ನು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯ ಅಡಿಯಲ್ಲಿ ಹಮ್ಮಿಕೊಂಡು ಬರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರಂಜನ್ ಇಂಡೇನ್ ಎಜೆನ್ಸಿ ಭಟ್ಕಳ- ೯೩೭೯೪೧೦೫೯೫ ಇವರನ್ನು ಸಂಪರ್ಕಿಸಬಹುದು ಎಂದರು.
ಪಾದಯಾತ್ರೆಗೆ ಸಹಕಾರ ನೀಡುತ್ತಿರುವ ಸಚಿವ ಮಂಕಾಳ ವೈದ್ಯ, ಶ್ರೀ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಪೊಲೀಸರು, ಪಾನೀಯ ವ್ಯವಸ್ಥೆ ಮಾಡುತ್ತಿರುವ ಆಸರಕೇರಿ ಕ್ರೀಯಾಶೀಲ ಬಳಗದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಕಳೆದ ಹಲವಾರು ವರ್ಷಗಳಿಂದ ನಮ್ಮೊಂದಿಗೆ ಇದ್ದು, ಕೆಲ ತಿಂಗಳ ಹಿಂದೆ ಮೃತರಾಗಿರುವ ಮಾರುತಿ ದೇವಾಡಿಗ ಅವರ ಸೇವೆಯನ್ನು ಸ್ಮರಿಸಿಕೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಗುರುಕೃಪಾ ಸಂಘದ ಉಪಾಧ್ಯಕ್ಷ ಕುಮಾರ ನಾಯ್ಕ ಕೋಣೆಮನೆ, ಶಾಂತಾರಾಮ ಭಟ್ಕಳ, ಅರುಣ ಚಂದಾವರ, ದೀಪಕ ನಾಯ್ಕ ರಂಗೀಕಟ್ಟೆ ಉಪಸ್ಥಿತರಿದ್ದರು.