ಶಿರೂರು; ಗ್ರಾಮ ಪಂಚಾಯತ್ ಅಭಿವೃದ್ದಿಯಾಗಬೇಕಾದರೆ ಕೇವಲ ಸರಕಾರದ ಅನುದಾನಗಳಿಂದ ಮಾತ್ರ ಸಾಧ್ಯವಿಲ್ಲ.ಸದಸ್ಯರ ಆಸಕ್ತಿ, ಅಧಿಕಾರಿಗಳ ಕ್ರಿಯಾಶೀಲತೆ ಮತ್ತು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿರುತ್ತದೆ.ಬಹುತೇಕ ಗ್ರಾಮಗಳಲ್ಲಿ ಕಸ ಸಾಗಾಟ ಮಾಡಲು ವಾಹನ ಸೌಲಭ್ಯವೇ ಇಲ್ಲದಿರುವ ಪರಿಸ್ಥಿತಿಯಲ್ಲಿ ಶಿರೂರು ಗ್ರಾಮ ಪಂಚಾಯತ್‌ನಲ್ಲಿ ಎರಡೆರಡು ಕಸ ಸಾಗಾಟ ವಾಹನ ನಿರ್ವಹಣೆ ಮಾಡುತ್ತಿರುವುದು ಮತ್ತು ದಾನಿಗಳು ಊರಿನ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿ ಸಹಕರಿಸುತ್ತಿರುವುದು ಇತರ ಊರುಗಳಿಗೆ ಮಾದರಿಯಾಗಿದೆ.ಇಂತಹ ಕಾರ್ಯಗಳಿಂದ ಶಿರೂರು ಗ್ರಾಮ ರಾಜ್ಯದಲ್ಲೆ ನಂಬರ್ ಒನ್ ಗ್ರಾಮವಾಗಲಿ ಎಂದರು.ಅವರು ಗ್ರಾಮ ಪಂಚಾಯತ್ ಶಿರೂರಿಗೆ ಎಮ್.ಎಮ್.ಫೌಂಡೇಶನ್ ಶಿರೂರು ವತಿಯಿಂದ ಕೊಡುಗೆಯಾಗಿ ನೀಡಿದ ಕಸ ಸಾಗಾಟ ವಾಹನ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಈ ಮಾತುಗಳನ್ನಾಡಿದರು.
ಸ್ವಚ್ಚತಾ ಅಭಿಯಾನ ಸಂಪನ್ನಗೊಳ್ಳಲಿ: ಕಸ ವಿಲೇವಾರಿಗಾಗಿ ಜಿಲ್ಲಾಡಳಿತ ಪ್ರತ್ಯೇಕ ಅನುದಾನ ಬಿಡುಗಡೆಗೆ ಅವಕಾಶಗಳಿಲ್ಲ .ಹೀಗಾಗಿ ಆಯಾಯ ಇಲಾಖೆಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪ್ರತಿ ತಿಂಗಳ ಮೊದಲ ಶನಿವಾರ ಸ್ವಚ್ಚತಾ ಕಾರ್ಯ ನಡೆಸಲು ಆದೇಶಿಸಲಾಗಿದೆ.ಊರಿನ ನೈರ್ಮಲ್ಯಕ್ಕೆ ಗ್ರಾಮ ಪಂಚಾಯತ್,ವಿವಿಧ ಸಂಘ ಸಂಸ್ಥೆಗಳು,ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಕಾರದಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಬೇಕಿದೆ.ಶಿರೂರಿನಲ್ಲಿ ಇಂತಹ ಪರಿಕಲ್ಪನೆ ರೂಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.ಈಗಾಗಲೇ ಕಸ ವಿಲೇವಾರಿ ಸ್ಥಳದ ಸಮಸ್ಯೆ ಕುರಿತು ಶೀಘ್ರ ಮಾಹಿತಿ ಪಡೆದು ಗ್ರಾಮ ಪಂಚಾಯತ್‌ಗೆ ಸ್ಥಳ ನೀಡುವುದಾಗಿ ತಿಳಿಸಿದರು.ಸಂಸದರ ನಿಧಿಯಲ್ಲಿ ಮಂಜೂರಾದ ಬಸ್ ನಿಲ್ದಾಣ ಕೆಲವು ಕಡೆ ಪೂರ್ಣಗೊಂಡಿದೆ.ಇನ್ನು ಕೆಲವು ಕಡೆ ಸ್ಥಳೀಯ ಸಮಸ್ಯೆಗಳಿಂದ ಆರಂಭಗೊಂಡಿಲ್ಲ.ಶಿರೂರು ಕೆಳಪೇಟೆ ಬಸ್ ನಿಲ್ದಾಣ ಕಾಮಗಾರಿ ಆರಂಭಿಸಲು ಹೆದ್ದಾರಿ ಅಽಕಾರಿಗಳಿಗೆ ಸ್ಥಳ ಗುರುತಿಸಲು ತಿಳಿಸುತ್ತೇನೆ ಮತ್ತು ಅಗತ್ಯ ಸಹಕಾರ ಜಿಲ್ಲಾಡಳಿತದಿಂದ ನೀಡುವುದಾಗಿ ತಿಳಿಸಿದರು.ಎಮ್.ಎಮ್.ಫೌಂಡೇಶನ್ ಹಾಗೂ ಶಿರೂರು ಅಸೋಸಿಯೇಷನ್ ಊರಿನ ಕಾಳಜಿಯ ಕೊಡುಗೆಯನ್ನು ಪ್ರಶಂಸಿದರು.
ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ,ಶಿರೂರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ,ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್ ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.
ಶಂಕರ ಬಿಲ್ಲವ ಸ್ವಾಗತಿಸಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ/ಪವನ್ ಶಿರೂರು