ಬೈಂದೂರು: ಒಂದು ಕ್ಷೇತ್ರದ ಪ್ರಗತಿ ಎನ್ನುವುದು ಕೇವಲ ಅಲ್ಲಿನ ಅಭಿವೃದ್ದಿ ಕಾರ್ಯ ಅಥವಾ ರಾಜಕೀಯ ಚಟುವಟಿಕೆಯಿಂದ ಮಾತ್ರ ಗುರುತಿಸುವುದಿಲ್ಲ ಬದಲಾಗಿ ಜನರ ಅಭಿಲಾಷೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸುವುದು ಕೂಡ ಜನಸಾಮಾನ್ಯರ ಕರ್ತವ್ಯ.ಬೈಂದೂರು ಉತ್ಸವದ ಮೂಲಕ ಹೊಸ ಪರಿಕಲ್ಪನೆಯ ಅನಾವರಣವಾಗಿದೆ.ಈ ಮೂಲಕ ಬೈಂದೂರು ಇನ್ನಷ್ಟು ಹೊಸತನಕ್ಕೆ ತೆರೆದುಕೊಂಡಿದೆ ಎಂದು ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು ಅವರು ಸಮೃದ್ದ ಬೈಂದೂರು ಟ್ರಸ್ಟ್ ಇದರ ವತಿಯಿಂದ ಬೈಂದೂರು ಗಾಂಧಿ ಮೈದಾನದಲ್ಲಿ ನಡೆದ ಬೈಂದೂರು ಉತ್ಸವ -2024 ಸಮಾರೋಪ ಸಮಾರಂಭದಲ್ಲಿ ಈ ಮಾತುಗಳನ್ನಾಡಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ ಬೈಂದೂರು ಉತ್ಸವ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಜಾಗತಿಕ ಮಟ್ಟದಲ್ಲಿ ಬೈಂದೂರಿನ ಹಿರಿಮೆ ಹೆಚ್ಚಿಸಿದೆ.ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಜನರ ಸಹಭಾಗಿತ್ವ ಮುಖ್ಯ.ಆಗ ಮಾತ್ರ ಕಾರ್ಯಕ್ರಮ ಯಶಸ್ಸು ಕಾಣುತ್ತದೆ.ಬೈಂದೂರು ಉತ್ಸವದಲ್ಲಿ ಹರಿದು ಬಂದ ಲಕ್ಷಾಂತರ ಜನಸಮೂಹ ನೋಡಿದಾಗ ಅದ್ಬುತ ಯಶಸ್ಸಿನ ಸಂತೃಪ್ತಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ ಪೂಂಜಾ,ಎಂ.ಎಸ್.ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು,ಕರ್ನಾಟಕ ರಕ್ಷಣಾ ವೇದಿಕೆಯ ಶಿವಾನಂದ ಶೆಟ್ಟಿ,ಉದ್ಯಮಿ ವೆಂಕಟೇಶ ಕಿಣಿ,ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ,ಹಟ್ಟಿಯಂಗಡಿ ದೇವಳದ ಆಡಳಿತ ಮೊಕ್ತೇಸರ ಬಾಲಚಂದ್ರ ಭಟ್,ಜಯಾನಂದ ಹೋಬಳಿದಾರ್,ಶಿರೂರು ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ಸಾಧನ್‌ದಾಸ್,ಉದ್ಯಮಿ ಗೋಕುಲ ಶೆಟ್ಟಿ ಉಪ್ಪುಂದ,ಗಣೇಶ ಗಂಗೊಳ್ಳಿ,ಉದ್ಯಮಿ ಗೋಪಾಲಕೃಷ್ಣ ಕಾಮತ್,ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ,ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್,ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಕುಮಾರ್,ರಾಮಚಂದ್ರ ಶಿರೂರಕರ್,ಗೌರಿ ದೇವಾಡಿಗ,ಸತೀಶ ಕೊಠಾರಿ,ಸದಾನಂದ ಉಪ್ಪಿನಕುದ್ರು,ಉಮೇಶ ಶೆಟ್ಟಿ ಕಲ್ಗದ್ದೆ,ಬೈಂದೂರು ಉತ್ಸವದ ಸಂಚಾಲಕ ಶ್ರೀಗಣೇಶ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ರವರನ್ನು ಬೈಂದೂರು ಉತ್ಸವ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.ಸಮೃದ್ದ ಬೈಂದೂರು ಟ್ರಸ್ಟ್ ಅಧ್ಯಕ್ಷ ಸುರೇಶ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಆರ್.ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.ಪ್ರದೀಪ ಶೆಟ್ಟಿ ಕಾರಿಕಟ್ಟೆ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ದೀಪಕ್ ಪೂಜಾರಿ ಶಿರೂರು