ಬೈಂದೂರು: ರಾಷ್ಟ್ರೀಯ ಹೆದ್ದಾರಿ 766ಸಿ ದ್ವಿಪಥ ರಸ್ತೆ ನಿರ್ಮಾಣದಲ್ಲಿ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ ಮತ್ತು ಹೆದ್ದಾರಿ ನಿರ್ಮಾಣದ ವಿಚಾರದ ಕುರಿತು ಇರುವ ಗೊಂದಲಗಳ ಪರಿಹಾರಕ್ಕೆ ಸಂಸದ ಬಿ.ವೈ ರಾಘವೇಂದ್ರ ರವರ ನೇತ್ರತ್ವದ ವಿಶೇಷ ಸಭೆ ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ನಡೆಯಿತು.ಅನುದಾನ ಮಂಜೂರಾಗಿ ಎರಡು ವರ್ಷ ಕಳೆದಿದ್ದು,ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.ಬೈಂದೂರು ಕ್ಷೇತ್ರ ವ್ಯಾಪ್ತಿಯ ಕೊಲ್ಲೂರಿನಿಂದ ಯಡ್ತರೆ ತನಕ ಭೂಸ್ವಾಧಿನ ಪ್ರಕ್ರಿಯೆ ವಿಳಂಬದಿಂದಾಗಿ ಕಾಮಗಾರಿ ಆರಂಭಿಸಲು ಹಿನ್ನಡೆಯಾಗಿದೆ.ಸಂಬಂಧಿತ ಇಲಾಖೆ ಈ ಬಗ್ಗೆ ವಿಶೇಷ ಮುತುರ್ವಜಿವಹಿಸಿ ರೈತರಿಗೆ ಯಾವುದೇ ಅನ್ಯಾಯವಾಗದಂತೆ ಗರಿಷ್ಠ ಪರಿಹಾರ ನೀಡುವ ಮೂಲಕ ಭೂಸ್ವಾಧಿನ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತ್ಯೇಕ ಸಮಿತಿ ರಚನೆ : ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ  ಭೂಸ್ವಾಧಿನ ಪ್ರಕ್ರಿಯೆ ಗೊಂದಲದಿಂದಾಗಿ ಹಲವು ಸಂತೃಸ್ತ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಇಲ್ಲಿನ ಭೂಸ್ವಾಧಿನ ಪ್ರಕ್ರಿಯೆಯ ಬಗ್ಗೆ ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದರು.ಈ ಸಮಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು, ಭೂಸ್ವಾಧಿನಾಧಿಕಾರಿ, ತೋಟಗಾರಿಕೆ, ಸಬ್‌ರಿಜಿಸ್ಟರ್ ಸೇರಿದಂತೆ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳಿದ್ದು, ಅವರ ನೇತೃತ್ವದಲ್ಲಿ ಜಂಟಿ ಸರ್ವೆ ಕಾರ್ಯ ನಡೆಸಿ, ಶೀಘ್ರ ಭೂಸ್ವಾಧಿನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.

ಪರಿಹಾರ ಪ್ರಮಾಣ: ರಾಷ್ಟ್ರೀಯ ಹೆದ್ದಾರಿಗಾಗಿ ಭೂಮಿ, ಕಟ್ಟಡ, ತೋಟ ಹಾಗೂ ಮರಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದ ಮಾನದಂಡದಂತೆ ಪರಿಹಾರ ಒದಗಿಸಲಾಗುತ್ತದೆ, ಸಂಬಂಧಿಸಿದ ಇಲಾಖೆ ಸಿದ್ಧಪಡಿಸಿದ ನಷ್ಟದ ಅಂದಾಜು ಪಟ್ಟಿಯಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೌಲ್ಯದ ಎರಡು ಪಟ್ಟು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ 5 ಕಿ.ಮೀ. ದೂರದವರೆಗೆ ಮೂರು ಪಟ್ಟು ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಲ್ಕು ಪಟ್ಟು ಪರಿಹಾರ ವಿತರಿಸಲಾಗುತ್ತದೆ. ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಡ್ತರೆಯಿಂದ ಸುಮಾರು 3.8 ಕಿ.ಮೀ ದೂರದವರೆಗೆ ರಸ್ತೆಯ ಎರಡು  ಭಾಗದಲ್ಲಿ ತಲಾ 8ಮೀ ಹಾಗೂ ಬಳಿಕ ಹಾಲ್ಕಲ್ ವರೆಗೆ ರಸ್ತೆಯ ಎರಡು ಭಾಗದಲ್ಲಿ ತಲಾ 15 ಮೀ. ಜಾಗವನ್ನು ಸ್ವಾಧಿನಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಡಿಎಫ್‌ಓ, ಕುಂದಾಪುರ ಸಹಾಯಕ ಕಮೀಷನರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

4 × 1 =