ಬೈಂದೂರು: ಬೈಂದೂರು ತಾಲೂಕಿನ ಐತಿಹಾಸಿಕ ಹಿನ್ನಲೆ ಇರುವ ಮತ್ತು ಸರ್ವಋತು ಬಂದರಿಗೆ ಅವಕಾಶವಿರುವ ಶಿರೂರು ಗ್ರಾಮದ ಅಳ್ವೆಗದ್ದೆ ಬಂದರು ಸಕಾಲಿಕ ಅಭಿವೃದ್ದಿ ಕಾಣದೆ ಮೀನುಗಾರರು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ.ಮಾತ್ರವಲ್ಲದೆ ಸಮೀಪದ ಕಳುಹಿತ್ಲು ಮೀನುಗಾರರು ಕೂಡ ಈ ಬಂದರಿನ ಅವಲಂಬನೆಯಿಂದ ಅಭಿವೃದ್ದಿಯ ನಿರೀಕ್ಷೆಯಲ್ಲಿದ್ದಾರೆ.

ಇಲ್ಲಿನ ಸಮಸ್ಯೆಗಳೇನು: ಕಳೆದ ಮಳೆಗಾಲ ಮತ್ತು ಇತ್ತೀಚೆಗೆ ಉಂಟಾದ ಕಡಲ ಅಬ್ಬರ ಹಿಂದೆಂದು ಕಂಡಿರಲಿಲ್ಲ.ಅಳ್ವೆಗದ್ದೆಯಲ್ಲಿ ದೋಣಿ ನಿಲ್ಲಿಸುವ ಜಾಗದ ಮೇಲ್ಬಾಗ ಕೊಚ್ಚಿ ಹೋದರೆ ಕಳುಹಿತ್ಲು ಭಾಗದಲ್ಲಿ ಅನೇಕ ವರ್ಷ ಹಿಂದೆ ನಿರ್ಮಿಸಿದ ತಡೆಗೋಡೆ ನೆಲಮಟ್ಟದಲ್ಲಿದೆ.ಈ ಕಲ್ಲುಗಳ ಗೋಡೆ ಇನ್ನಷ್ಟು ಎತ್ತರವಾಗದಿದ್ದರೆ ತೆರೆಯ ಅಬ್ಬರವಿದ್ದಾಗ ನೀರು ನುಗ್ಗುವ ಸಾದ್ಯತೆಗಳಿದೆ.ಮೀನುಗಾರಿಕೆಯನ್ನೆ ನಂಬಿರುವ ಈ ಭಾಗದ  ಮೀನುಗಾರರ ಸಂಕಷ್ಟಕ್ಕೆ ಸರಕಾರ ಸ್ಪಂಧಿಸಬೇಕಿದೆ.ಕಳೆದ ಬಾರಿ 60ಕ್ಕೂ ಮಿಕ್ಕಿ ಬೋಟ್‌ಗಳು ಕೊಚ್ಚಿ ಹೋಗಿದ್ದವು. ನೂರಾರು ಪಾತಿದೋಣಿಗಳು ತೇಲಿ ಹೋಗಿದ್ದವು. ಬಲೆ, ಎಂಜಿನ್‌ಗಳು ಸಮುದ್ರ ಪಾಲಾಗಿದ್ದವು. ಬೋಟ್ ನಿಲುಗಡೆಯ ಜಾಗ ಶಿಥಿಲಗೊಂಡಿತ್ತು. ಬೀದಿ ದೀಪ ಸಮಸ್ಯೆ,ಜಟ್ಟಿ ನಿರ್ಮಾಣ,ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ಮೀನುಗಾರಿಕೆ ಇಲಾಖೆಯಿಂದ ಮಂಜೂರಾದ ಯೋಜನೆಗಳು ಶೀಘ್ರ ಅನುದಾನ ದೊರೆತು ಕಾಮಗಾರಿ ಆರಂಭವಾದರೆ ಮೀನುಗಾರರ ಬದುಕು ಒಂದಿಷ್ಟು ಹಸನಾಗಬಹುದಾಗಿದೆ.ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುವ ಈ ಭಾಗದಲ್ಲಿ ಸೀ ವಾಕ್ ನಿರ್ಮಿಸಿದರೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದಾಗಿದೆ.ಸರಕಾರ ಹಾಗೂ ಇಲಾಖೆ ಬಂದರಿನ ಅಭಿವೃದ್ದಿಗೆ ಸೂಕ್ತ ಸ್ಪಂದಿಸುವ ಕೆಲಸ ಮಾಡಿಲ್ಲ ಮತ್ತು ಸ್ಥಳೀಯ ಮೀನುಗಾರರ ಅಭಿಪ್ರಾಯ ಪಡೆದು ಕಾಮಗಾರಿ ನಿರ್ವಹಿಸುತ್ತಿಲ್ಲ ಎನ್ನುವುದು ಇಲ್ಲಿನ ಮೀನುಗಾರರ ಅಳಲಾಗಿದೆ.

ಹೇಳಿಕೆ.

10 ವರ್ಷ ಹಿಂದೆ ಬ್ರೇಕ್ ವಾಟರ್ ನಿರ್ಮಾಣಕ್ಕೆ ಸುಮಾರು 9 ಕೋಟಿ ರೂಪಾಯಿ ಅನುದಾನ ಹೊರತು ಪಡಿಸಿದರೆ ಇತರ ಅನುದಾನ ಬಂದಿಲ್ಲ. ಔಟ್ ಡೋರ್ ಬಂದರು, ಬ್ರೇಕ್‌ವಾಟರ್ ವಿಸ್ತರಣೆ, ಪಾತಿ ದೋಣಿಗಳ ನಿಲುಗಡೆ ಕೇಂದ್ರ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಅತಿವೃಷ್ಟಿಗೆ ಬಂದರು ಮತ್ತು ಮೀನುಗಾರಿಕಾ ವಲಯ ಅಪಾರ ನಷ್ಟ ಅನುಭವಿಸಿತ್ತು.ಬೋಟ್ ಕಳೆದುಕೊಂಡ ಮೀನುಗಾರರಿಗೆ ತಾತ್ಕಾಲಿಕ ಪರಿಹಾರ 6 ಸಾವಿರ ರೂಪಾಯಿ ಕೂಡ ಸರಿಯಾಗಿ ಸಿಕ್ಕಿಲ್ಲ. ಸೀಮೆಎಣ್ಣೆ  ಪೂರೈಕೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ, ಸರಕಾರ ತುರ್ತು ಗಮನಹರಿಸಬೇಕು…..ನಾಗೇಶ ಮೊಗೇರ ಅಳ್ವೆಗದ್ದೆ, ಸ್ಥಳೀಯ ಗ್ರಾ.ಪಂ.ಸದಸ್ಯ.

ಹೇಳಿಕೆ.

ಅಳೆಗದ್ದೆ ಮೂರು ದಶಕದ ಹಿಂದೆ ಸುರಕ್ಷಿತ ಬಂದರು ಎಂದು ಗುರುತಿಸಿಕೊಂಡಿತ್ತು. ಐದಕ್ಕೂ ಹೆಚ್ಚು ಬೋಟ್ ನಿರ್ಮಾಣ ಕೇಂದ್ರಗಳಿವೆ.ಪರ್ಸಿನ್, ಟ್ರಾಲ್ ಸೇರಿದಂತೆ ದೊಡ್ಡ ಬೋಟ್‌ಗಳು ಬಂದರು ಪ್ರವೇಶಿಸುತ್ತಿದ್ದವು.ಅಳಿವೆಯಲ್ಲಿ ತುಂಬಿರುವ ಹೂಳಿನಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೋಟ್‌ಗಳು ಒಳ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಭಟ್ಕಳ ಹಾಗೂ ಗಂಗೊಳ್ಳಿ ನಡುವಿನ ಮೀನುಗಾರರ ನೆಲೆಯಾಗಿರುವ ಅಳ್ವೆಗದ್ದೆ ಬಂದರು ಪ್ರದೇಶವನ್ನು ನಿರ್ಲಕ್ಷಿಸಲಾಗುತ್ತಿದೆ. ಸರ್ವಋತು ಬಂದರನ್ನಾಗಿ ರೂಪಿಸಬಹುದಾದ ಅನುಕೂಲತೆಗಳಿದ್ದರೂ ಬಂದರು ಅಭಿವೃದ್ಧಿಗೆ ಯಾವುದೇ ಕೊಡುಗೆ ಸಿಗದಿರುವುದು ಬೇಸರದ ಸಂಗತಿ. ಕಳುಹಿತ್ಲು ಭಾಗದಲ್ಲೂ ಉತ್ತಮ ಅವಕಾಶವಿದ್ದು ಜಂಟಿ ಅಭಿವೃದ್ದಿಯಾಗಬೇಕಿದೆ ….…ತಾರಿಸುಲ್ಲಾ ಮಹ್ಮದ್ ಗೌಸ್ ಕಳುಹಿತ್ಲು , ಸ್ಥಳೀಯ ಗ್ರಾ.ಪಂ ಸದಸ್ಯ

ಚಿತ್ರ: ಮಹಾದೇವ ಗೊಂಡ ಕಡ್ಕೆ

 

Leave a Reply

Your email address will not be published. Required fields are marked *

10 − 6 =