ಬೈಂದೂರು: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ) ಬೆಂಗಳೂರು ಇವರಿಂದ ಬೈಂದೂರು ಜನಸೇವಾ ಚಾರಿಟೇಬಲ್ ಟ್ರಸ್ಟ್ (ರಿ) ಬೈಂದೂರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲೆಯ 350 ಸರ್ಕಾರಿ /ಅನುದಾನಿತ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 41,000 ಜೊತೆ ಉಚಿತ ಶಾಲಾ ಸಮವಸ್ತ್ರ ವಿತರಣೆ ಸಮಾರಂಭ ಶನಿವಾರ ಬೈಂದೂರಿನ ಜೆ.ಎನ್.ಆರ್ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ವಿಧಾನಸಭೆ ಸಭಾಪತಿ ಯು.ಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಗತ್ತಿನಲ್ಲಿ ಶ್ರೇಷ್ಟತೆ ಕಂಡಿರುವ ಭಾರತ ದೇಶಕ್ಕೆ ಅದರದ್ದೆ ಆದ ಇತಿಹಾಸವಿದೆ. ವಿದಾನಸಭೆ,ಸಂಸತ್ ಸಭೆ ಅಥವಾ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸಮಾಲೋಚಿಸಿದ ಮಾತ್ರಕ್ಕೆ ದೇಶ ಬಲಿಷ್ಟವಾಗುವುದಿಲ್ಲ ಈ ದೇಶ ಬಲಿಷ್ಟವಾಗಬೇಕಾದರೆ ಪ್ರತಿ ತರಗತಿ ಕೋಣೆಯಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆತಾಗ ಭವ್ಯ ಭಾರತದ ಭವಿಷ್ಯ ಬಲಿಷ್ಟಗೊಳ್ಳುತ್ತದೆ.ಬೈಂದೂರು ಕ್ಷೇತ್ರದಲ್ಲಿ ಶೈಕ್ಷಣಿಕ,ಸಾಮಾಜಿಕ ಸೇವೆ ಹಾಗೂ ಕೊಡುಗೆ ಅಪಾರ.ಇಂತಹ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕರಿಸುತ್ತಿರುವ ಡಾ. ಹೆಚ್.ಎಸ್ ಶೆಟ್ಟಿಯವರ ಕೊಡುಗೆ ಶ್ಲಾಘನೀಯವಾಗಿದೆ.ಧನವಂತರು ಬಹಳಷ್ಟು ಜನ ಇರುತ್ತಾರೆ ಆದರೆ ಕೊಡುವಂತಹ ಹ್ರದಯ ವೈಶಾಲ್ಯತೆ ಕಡಿಮೆ ಜನರಿಗಿರುತ್ತದೆ.ಅಂತಹ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡ ಡಾ.ಹೆಚ್.ಎಸ್ ಶೆಟ್ಟಿಯವರು ನೈಜ ದೇಶ ಸೇವಕರು ಎಂದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ) ಬೆಂಗಳೂರು ಇದರ ಅಧ್ಯಕ್ಷ ಡಾ. ಹೆಚ್.ಎಸ್.ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ಮೂಲಕ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆ ಅದರಲ್ಲೂ ಮುಖ್ಯವಾಗಿ ಸರಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಕರ್ಯದ ಪೂರೈಕೆಗೆ ಆದ್ಯತೆ ನೀಡಲಾಗಿದೆ. ಉಡುಪಿ ಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ನಮ್ಮ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದು ಪ್ರತಿ ವರ್ಷ ಜಿಲ್ಲೆಯ ಒಂದು ತಾಲೂಕಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ.ಈ ವರ್ಷ ಒಟ್ಟು 41 ಸಾವಿರ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗುತ್ತಿದೆ ಇದರ ಜೊತೆಗೆ ಗಣಕಯಂತ್ರ,ಶೌಚಾಲಯ,ಕುಡಿಯುವ ನೀರು,ಕೊಠಡಿ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ಪ್ರಯತ್ನ ನಡೆಸುತ್ತಿದೆ.ವಿಶೇಷವಾಗಿ ಮುಂದಿನ ಐದು ವರ್ಷದಲ್ಲಿ ಒಟ್ಟು ನೂರು ಬಡವರಿಗೆ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡಲಿದ್ದು ಅವುಗಳಲ್ಲಿ ಹದಿನಾಲ್ಕು ಮನೆಗಳ ಕಾಮಗಾರಿ ಪೂರ್ಣಗೊಂಡಿದೆ.ದುಡಿಮೆಯ ಒಂದು ಭಾಗ ಸಮಾಜಕ್ಕೆ ನೀಡುವ ಸಂತ್ರಪ್ತಿ ನಮ್ಮ ಟ್ರಸ್ಟ್ ನ ಮೂಲಕ ನಡೆಯುತ್ತಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು.ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭಸಂಸನೆಗೈದರು.
ಮುಖ್ಯ ಅತಿಥಿಗಳಾಗಿ ಶಾಸಕ ಗುರುರಾಜ ಗಂಟಿಹೊಳೆ,ಕುಂದಾಪುರ ಶಾಸಕ ಕಿರಣ ಕುಮಾರ್ ಕೊಡ್ಗಿ,ಉಡುಪಿ ಶಾಸಕ ಯಶಪಾಲ್ ಸುವರ್ಣ,ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ,ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಗಣಪತಿ,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ,ದಿನೇಶ ಹೆಗ್ಡೆ ಮೊಳವಳ್ಳಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ನಿವೃತ್ತ ಶಿಕ್ಷಕ ಹಾಗೂ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿಯವರಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ್ ಪ್ರಶಸ್ತ್ತಿನೀಡಿ ಗೌರವಿಸಲಾಯಿತು,ಸಭಾಪತಿಗಳಾದ ಯು.ಟಿ ಖಾದರ್ ರವರನ್ನು ಸಮ್ಮಾನಿಸಲಾಯಿತು ಹಾಗೂ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.
ಸಮೃದ್ದ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಸ್ವಾಗತಿಸಿದರು. ಅಕ್ಷಯ ಮೊಳವಳ್ಳಿ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ರಾಜೀವ ಶೆಟ್ಟಿ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ದೀಪಕ್ ಪೂಜಾರಿ ಶಿರೂರು