ಬೈಂದೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರ ಬೈಂದೂರು ವ್ಯಾಪ್ತಿಯಲ್ಲಿ ಉಗ್ರ ಪ್ರತಾಪ ತೀರಿದೆ.ಗುಡುಗು ಮಿಂಚು ಸಹಿತ ಸುರಿದ ಗಾಳಿ ಮಳೆಗೆ ಅಪಾರ ನಷ್ಟ ಉಂಟು ಮಾಡಿದೆ.ಆರಂಭದಲ್ಲೆ ಮೆಸ್ಕಾಂ ಇಲಾಖೆಗೆ ಬಾರಿ ಹೊಡೆತ ಬಿದ್ದಿದ್ದು ಈ ಇಲಾಖೆಯೊಂದಕ್ಕೆ ಸುಮಾರು 50 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.
ಬೈಂದೂರು ಮೆಸ್ಕಾಂ ಟ್ರಾನ್ಸ್ ಫಾರ್ಮರ ಮೇಲೆ ಉರುಳಿದ ಮರ 50 ಲಕ್ಷ ರೂಪಾಯಿ ನಷ್ಟ; ಬೈಂದೂರು ಮೆಸ್ಕಾಂ ಸ್ಟೇಷನ್ ಟ್ರಾನ್ಸ್ ಪಾರ್ಮರ್ ಮೇಲೆ ಮರಬಿದ್ದು 50 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.ಬ್ರಹತ್ ಗೋಳಿಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿದೆ.ಹೀಗಾಗಿ ವಿದ್ಯುತ್ ಮುಖ್ಯ ಸರಬರಾಜು ಸ್ಥಗಿತಗೊಂಡಿದ್ದು ಬೆಳಕು ನೀಡಬೇಕಾದ ಇಲಾಖೆಗೆ ಕತ್ತಲು ಕವಿದಿದೆ.ಹೀಗಾಗಿ ಗುರುವಾರದಿಂದ ಬೈಂದೂರು ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಾಗದ ಕಾರಣ ಜನಜೀವನ ಅಸ್ತವ್ಯಸ್ಥಗೊಂಡಿದೆ.ರಿಪೇರಿ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಇದೆ ಮೊದಲ ಬಾರಿಗೆ ಈ ರೀತಿಯ ಗುಡುಗು ಸಿಡಿಲು ಉಂಟಾಗಿದೆ ಎನ್ನುವುದು ಹಿರಿಯರ ಅಭಿಪ್ರಾಯ.
ಎಪ್ಪತ್ತಕ್ಕೂ ಅಧಿಕ ವಿದ್ಯುತ್ ಕಂಬ ಧರೆಗೆ: ದಿಢೀರ್ ಬೀಸಿದ ಗಾಳಿ ಮಳೆಗೆ ಬೈಂದೂರು ವ್ಯಾಪ್ತಿಯಲ್ಲಿ 45 ಕಂಬ,ದೊಂಬೆ ಪರಿಸರದಲ್ಲಿ 12 ಕಂಬ ಹಾಗೂ 30ಕ್ಕೂ ಅಧಿಕ ತೆಂಗಿನ ಮರ ಉರುಳಿ ಬಿದ್ದಿದೆ.ಪಡುವರಿ ಗ್ರಾಮದ ದೊಂಬೆಯಲ್ಲಿ ವಿದ್ಯುತ್ ಕಂಬಗಳು ಧರೆಗೆ ವಾಲಿಕೊಂಡಿದ್ದು ಬೀಳುವ ಸ್ಥಿತಿಯಲ್ಲಿದೆ.ಶಿರೂರು ಚಿಕ್ಕಮ ಪೂಜಾರ್ತಿ,ದುರ್ಗಿ,ಕೃಷ್ಣಿ ಪೂಜಾರ್ತಿ ಯವರ ಮನೆ ಮೇಲೆ ಮರ ಉರುಳಿದೆ. ದನದ ಕೊಟ್ಟಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಪ್ಪತ್ತು ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ.
ಶುಕ್ರವಾರ ಇಂಟರ್ನೆಟ್ ಬಂದ್; ವಿದ್ಯುತ್ ವ್ಯತ್ಯಯದಿಂದಾಗಿ ಬೈಂದೂರು ಬಿ.ಎಸ್.ಎನ್.ಎಲ್ ನೆಟ್ವರ್ಕ್ ಕೈಕೊಟ್ಟಿದೆ.ಎರಡು ದಿನದಿಂದ ಇಂಟರ್ನೆಟ್ ದೊರಕದ ಪರಿಣಾಮ ಕಛೇರಿ ಸೇರಿದಂತೆ ಪ್ರಮುಖ ಕೆಲಸ ಕಾರ್ಯ ಸ್ಥಗಿತಗೊಂಡಿದೆ.ಹೆದ್ದಾರಿಯಲ್ಲೂ ಕೂಡ ಸಮರ್ಪಕ ಚರಂಡಿ ಸಮಸ್ಯೆಯಿಂದ ರಸ್ತೆಯುದ್ದಕ್ಕೂ ನೀರು ಹರಿಯತೊಡಗಿದೆ.ವಿದ್ಯುತ್ ವ್ಯತ್ಯಯವಾದ ಸ್ಥಳಗಳಿಗೆ ಹಾಗೂ ಹಾನಿಗೊಳಗಾದ ಸ್ಥಳಗಳಿಗೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್,ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್ ಬೇಟಿ ನೀಡಿದ್ದಾರೆ.
ವರದಿ/ಚಿತ್ರ; ಗಿರಿ ಶಿರೂರು