ಬೈಂದೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರವು ವಿಶೇಷವಾದ ಕನಸು ಮತ್ತು ಕಲ್ಪನೆಯೊಂದಿಗೆ ಪ್ರಚಾರ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ. ಕಳೆದ ಬಾರಿ 74 ಸಾವಿರ ಲೀಡ್ ನೀಡಿದ್ದೇವು. ಈ ಬಾರಿ ಒಂದು ಲಕ್ಷ ಲೀಡ್ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಈ ಹಿನ್ನೆಲೆ ಮೇ 7 ರ ಮತದಾನದ ದಿನದಂದು ಕ್ಷೇತ್ರ 246 ಬೂತ್ ಗಳಲ್ಲಿ ಮೊದಲ ಮತದಾನ 9 ಮಂದಿ ಮಹಿಳೆಯರಿಂದಲೇ ಮಾಡಿಸಬೇಕು ಎಂದು ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಹೇಳಿದರು.ಬೈಂದೂರಿನಲ್ಲಿ ಮಾತನಾಡಿದ ಅವರು, ಬೈಂದೂರು ಕ್ಷೇತ್ರದಿಂದ ಒಂದು ಲಕ್ಷಕ್ಕೂ ಅಧಿಕ ಲೀಡನ್ನು ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಅವರಿಗೆ ನೀಡುವುದು ಮಾತ್ರವಲ್ಲದೆ ಪ್ರಧಾನಿ ಮೋದಿ ಅವರು ಚುನಾವಣೆಯ ನಂತರ ಕೊಲ್ಲೂರಿಗೆ ಬಂದು ದೇವಿಯ ದರ್ಶನ ಮಾಡಬೇಕು. ಕೊಲ್ಲೂರು ಕಾರೀಡಾರ್ ಘೋಷಣೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ. ಅದನ್ನು ಬಿ.ವೈ. ರಾಘವೇಂದ್ರ ಅವರಲ್ಲಿಯೂ ಹೇಳಿದ್ದು ಅವರಿಂದ ಒಪ್ಪಿಗೆ ಪಡೆದ ನಂತರ ಬೂತ್ ಗಳಲ್ಲಿ ವಿಶೇಷ ಸಂಚಾರ ನಡೆಸಿ ಈ ಸಂಬಂಧ ಪ್ರತಿಜ್ಞಾವಿಧಿಯನ್ನು ಬೋಧಿಸಲಾಗಿತ್ತು. ಇಡೀ ಕ್ಷೇತ್ರದಾದ್ಯಂತ ಬಿಜೆಪಿ ಪರ ಅಲೆ ಎದ್ದಿದೆ ಎಂದು ಹೇಳಿದರು.ಕೊಲ್ಲೂರು ಕಾರೀಡಾರ್ ರಚನೆ ಮತ್ತು ದೇಶ, ಹಿಂದುತ್ವ ಈ ಎಲ್ಲಾ ವಿಚಾರಗಳ ಆಧಾರದಲ್ಲಿ ಚುನಾವಣೆಯು ಬಹಳ ಮಹತ್ವವಾದದ್ದು. ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೊಲ್ಲೂರು ಕಾರೀಡಾರ್ ರಚನೆಗೆ ಪೂರಕವಾಗುವಂತೆ ಎಲ್ಲಾ ಬೂತ್‌ಗಳಲ್ಲೂ ನವ ದುರ್ಗೆಯರಿಂದ (9 ಮಂದಿ ಮಹಿಳೆಯರಿಂದ ) ಮೊದಲ ಮತದಾನ ಮಾಡಿಸುವುದು. ಬಿಸಿಲು ಜಾಸ್ತಿ ಇರುವುದರಿಂದ ಬೆಳಿಗ್ಗೆ 10 ಗಂಟೆಯೊಳಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಆಗುವಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಮನವಿ ಮಾಡಿದರು.ಬೈಂದೂರು ವಿಧಾನಸಭಾ ಕ್ಷೇತ್ರದ ಭೌಗೋಳಿಕ ವಿನ್ಯಾಸವು ಬೆಟ್ಟ-ಗುಡ್ಡ ನದಿ ಹೀಗೆ ಎಲ್ಲವನ್ನು ಒಳಗೊಂಡಿದೆ. ಈಗಾಗಲೇ ಬೂತ್ ಕಡೆಗೆ ಸಮೃದ್ಧ ನಡೆಗೆ ಮೂಲಕ ಎಲ್ಲಾ ಬೂತ್ ಗಳಿಗೂ ಸಂಚಾರ ಮಾಡಿದ್ದೇವೆ. ಈ ವೇಳೆ ಕಾರ್ಯಕರ್ತರಲ್ಲೂ ಬೆಳಿಗ್ಗೆ ಬೇಗ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಲು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಅತ್ಯಧಿಕ ಅನುದಾನ; ಸಂಸದರಾದ ಬಿ.ವೈ. ರಾಘವೇಂದ್ರ ಅವರು ಸುಮಾರು 3 ಕೋಟಿಗೂ ಅಧಿಕ ಅನುದಾನಗಳನ್ನು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದಾರೆ. ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಲು ಬಾಕಿ ಇದೆ. ಬೈಂದೂರಿನಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಒಂದು ಹಂತದ ಕಾಮಗಾರಿ ಬಾಕಿ ಇದೆ. ಅದಕ್ಕೆ ಟೆಂಡರ್ ಇನ್ನು ಆಗಬೇಕಿರುವುದರಿಂದ ಸರ್ಕಾರ ಚುನಾವಣೆ ನಂತರ ಟೆಂಡರ್ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 2.4 ಕೋಟಿ ವೆಚ್ಚದ ಕಾಮಗಾರಿ ಬಾಕಿ ಇದೆ. ಆದಷ್ಟು ಬೇಗ ಕಾಮಗಾರಿ ನಡೆದು ಬಸ್ ನಿಲ್ದಾಣ ಜನಸಾಮಾನ್ಯರ ಸೇವೆ ಸಿಗುವಂತಾಗಬೇಕು ಎಂದು ಹೇಳಿದರು.