ಶಿರೂರು: ದಿವಂಗತ ಬಂಗಾರಪ್ಪರವರ ಮಗಳಾಗಿ ರಾಜಕೀಯದ ಅನುಭವಗಳನ್ನು ಹತ್ತಿರದಿಂದ ತಿಳಿದಿದ್ದೇನೆ.ಸಾಮಾಜಿಕ ಕ್ಷೇತ್ರದ ಅನುಭವಗಳ ಮೂಲಕ ಜನಸೇವೆ ಮಾಡಲು ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ.ಜನಸಾಮಾನ್ಯರು ಮಹಿಳೆಯರ ಪರ ಸದಾ ಧ್ವನಿಯಾಗಿರುತ್ತೇನೆ.ಜನಸೇವೆ ಮಾಡಲು ಅವಕಾಶ ನೀಡಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.ಅವರು ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.

ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಜನಪರ ಆಡಳಿತ ನೀಡಿದೆ.ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆ ಮನೆ ತಲುಪಿದೆ.ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಿ ನಂಬಿಕೆ ಉಳಿಸಿಕೊಂಡಿದ್ದೇವೆ ಹೀಗಾಗಿ ಗ್ಯಾರಂಟಿ ಯೋಜನೆಗಳು ನಮ್ಮನ್ನು ಗೆಲ್ಲಿಸಲಿದೆ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಕಳೆದ ಚುನಾವಣೆಯಲ್ಲಿ ಬಿಜೆಪಿ ನಾಯಕರು ಹಸಿ ಹಸಿ ಸುಳ್ಳು ಹೇಳಿದ್ದಾರೆ.ಸಂಸದ ಬಿ.ವೈ ರಾಘವೇಂದ್ರ ಈ ಕ್ಷೇತ್ರದಲ್ಲಿ ಯಾವ ಕೆಲಸವು ಮಾಡಿಲ್ಲ.ಕೋಟ ಶ್ರೀನಿವಾಸ ಪೂಜಾರಿ ನಮ್ಮ ಗ್ಯಾರಂಟಿ ಯೋಜನೆಗಳು ಪುಸ್ತಕದ ನವಿಲುಗಿರಿ ಅದು ಮರಿ ಹಾಕೋದಿಲ್ಲ ಎಂದು ಲೇವಡಿ ಮಾಡಿದ್ದರು.ಆದರೆ ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಿದೆ.ನಿಮ್ಮ ಭರವಸೆಯ ಕೊಚ್ಚಿಲಕ್ಕಿ ಎಲ್ಲಿದೆ ಎಂದು ಹೇಳಿ ಎಂದರು.

ಚಿತ್ರನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಪರ ಮತಯಾಚಿಸಿದರು ಮತ್ತು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅತ್ಯುತ್ತಮ ಸೇವೆ ನೀಡಲು ನಾನು ಭರವಸೆ ನೀಡುತ್ತೇವೆ.ಜನರ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.

ಮಾಜಿ ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಮಾತನಾಡಿ ಗೀತಾ ಶಿವರಾಜ್ ಕುಮಾರ್ ಗೆಲುವು ನೂರಕ್ಕೆ ನೂರು ನಿಶ್ಚಿತ.ಅವರಿಗೆ ಕೊಲ್ಲೂರು ತಾಯಿ ಮೂಕಾಂಬಿಕೆಯ ಅನುಗ್ರಹವಿದೆ.ಬಿಜೆಪಿ ಸ್ವಾರ್ಥ ರಾಜಕಾರಣದ ಪಕ್ಷ.ಕೇವಲ ತೋರ್ಪಡಿಕೆ ಸಿದ್ದಾಂತ ಬಿಟ್ಟರೆ ವಾಸ್ತವದಲ್ಲಿ ಅದರ ನೈಜಮುಖ ಬೇರೆ ಇದೆ.ಈ ಬಾರಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಸೋಲುವುದರಲ್ಲಿ ಸಂಶಯವಿಲ್ಲ.ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ ಎಂದರು.

ಈ ಸಂದರ್ಭದಲ್ಲಿ ಜಿ.ಎ ಭಾವಾ,ಚುನಾವಣಾ ಉಸ್ತುವಾರಿ ಟಿ.ಆರ್.ರಾಜು,ಆಯನೂರು ಮಂಜುನಾಥ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ಎಸ್.ರಾಜು ಪೂಜಾರಿ,ಬಾಬು ಶೆಟ್ಟಿ,ಸದಾಶಿವ ಡಿ.ಪಡುವರಿ,ಶಂಕರ ಪೂಜಾರಿ,ಹಿರಿಯರಾದ ನಾರಾಯಣ ಅಳ್ವೆಗದ್ದೆ,ನಾಗರತ್ನ ಆಚಾರ್ಯ,ನೂರ್‌ಮಹ್ಮದ್,ಎಚ್.ಎಸ್.ಸಿದ್ದಿಕ್,ಸುಬ್ರಹ್ಮಣ್ಯ ಪೂಜಾರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಶಿರೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್ ಸ್ವಾಗತಿಸಿದರು.ಪ್ರಸನ್ನ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಶಕೀಲ್ ಅಹ್ಮದ್ ವಂದಿಸಿದರು.

News/pic: Giri shiruru

 

 

Leave a Reply

Your email address will not be published.

five × one =