ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ವಂಡ್ಸೆ ಮತ್ತು ಬ್ಲಾಕ್ ಕಾಂಗ್ರೆಸ್ ಬೈಂದೂರು ಕ್ಷೇತ್ರದ ಕಾರ್ಯಕರ್ತರ ಸಭೆ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ನಡೆಯಿತು.
ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರವರ ಕುಟುಂಬದಿಂದ ಹಿನ್ನೆಲೆ ಇರುವ ಕಾರಣ ರಾಜಕೀಯದ ಆಗು ಹೋಗುಗಳ ಅನುಭವದ ನಡುವೆ ಬೆಳೆದು ಬಂದಿದ್ದೇನೆ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡುತ್ತಿದೆ.ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂಧಿಸುವ ಗ್ಯಾರೆಂಟಿ ಯೋಜನೆಗಳು ಜನಮಾನಸದಲ್ಲಿದೆ.ಹೀಗಾಗಿ ಈ ಬಾರಿ ಕೇಂದ್ರದ ಯಾವ ಅಲೆಗೂ ಮತದಾರರು ಬೆಲೆ ನೀಡಲಾರರು. ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತದಿಂದ ಗೆಲ್ಲಲಿದೆ.ಎಲ್ಲರೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಹೋರಾಟದ ಮೂಲಕ ಪ್ರಯತ್ನಿಸೋಣ ಎಂದರು.
ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಮನೆ ಗೊಂದಲದ ಗೂಡಾಗಿದೆ.ಮೋದಿ ಹೆಸರಿನಲ್ಲಿ ಮತ ಕೇಳುವ ಬಿಜೆಪಿಗರಿಗೆ ಇಲ್ಲಿನ ಸಂಸದರು ಕ್ಷೇತ್ರಕ್ಕೆ ಎನು ಕೊಟ್ಟಿದ್ದಾರೆ ಎಂದು ತಿಳಿಯುವ ಬುದ್ದಿವಂತಿಕೆ ಇದೆ.ಧರ್ಮ,ಜಾತಿಗಳನ್ನು ಎತ್ತಿಕಟ್ಟಿ ಭಾವನಾತ್ಮಕ ವಿಷಯಗಳ ಮೂಲಕ ಗೆಲ್ಲುವ ಬಿಜೆಪಿ ಹುನ್ನಾರ ಫಲ ನೀಡದು.ರಾಜ್ಯದಲ್ಲಿ ಸಿದ್ದರಾಮಯ್ಯ ಜನಪರ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಿದೆ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಬಂಗಾರಪ್ಪ ನನ್ನನ್ನು ರಾಜಕೀಯಕ್ಕೆ ಕರೆ ತಂದ ಗುರು ಆಗಿದ್ದಾರೆ.ಅವರು ಮುಖ್ಯಮಂತ್ರಿಯಾಗಿದ್ದಾಗ ತಂದಿರುವ ಯೋಜನೆಗಳು ಜನಸಾಮಾನ್ಯರ ಕಷ್ಟಗಳನ್ನು ನೀಗಿಸಿದೆ.ಇಂದಿಗೂ ಆ ಯೋಜನೆಗಳು ಜನರಿಗೆ ಬೆಳಕಾಗಿದೆ.ಹೀಗಾಗಿ ಬಂಗಾರಪ್ಪರವರ ಋಣ ತೀರಿಸಬೇಕಾದ ಜವಬ್ದಾರಿಯಿದೆ.ಆದುದರಿಂದ ಗೀತಾ ಶಿವರಾಜ್ ಕುಮಾರ್ ರವರು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಾಗಿದೆ ಎಂದರು.
ಕೋಟ ವಿರುದ್ದ ಹರಿಹಾಯ್ದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ; ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಹರಿಹಾಯ್ದ ಅವರು ಶ್ರೀನಿವಾಸ ಪೂಜಾರಿ ಯವರಿಗೆ ಈಗ ಜಾತಿ ನೆನಪಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿ ಭಯೋತ್ಪಾದಕ ಎಂದಿದ್ದಾರೆ.ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಳಂಕ ಇಲ್ಲದೆ ಜನರ ಸೇವೆ ಮಾಡಿದ್ದೇನೆ.ದಿನಕ್ಕೊಂದು ನಾಯಕರಿಗೆ ಕಿವಿ ಊದುವ ಕೋಟ ಮಹಾನ್ ಸುಳ್ಳುಗಾರ.ಸಚಿವರಾಗಿದ್ದಾಗ ನೀಡಿದ ಅಶ್ವಾಸನೆಯ ಒಂದೇ ಒಂದು ಜನಪರ ಕೆಲಸ ಮಾಡದೇ ಬಿಜೆಪಿಯ ಕೆಲವು ಮುಖಂಡರ ಕೈಗೊಂಬೆಯಾದ ಇವರು ಸಂಸತ್ತಿನಲ್ಲಿ ವ್ಯವಹರಿಸಲು ಕನಿಷ್ಟ ಭಾಷಾ ಜ್ಞಾನ ಕೂಡ ಇವರಿಗಿಲ್ಲ. ಸರಳತೆ ಎಂದು ನಾಟಕವಾಡಿ ಮರಳು ಮಾಡುವುದು ಕೋಟಗೆ ಚೆನ್ನಾಗಿ ತಿಳಿದಿದೆ.ಅಲ್ಲಿನ ಕ್ಷೇತ್ರದ ಜನ ಸೋಲಿಸಿ ಮನೆಗೆ ಕಳಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಚಿತ್ರನಟ ಶಿವರಾಜ್ ಕುಮಾರ್,ಸಚಿವ ಮಧು ಬಂಗಾರಪ್ಪ,ಮಾಜಿ ಸಚಿವರಾದ ಕಿಮ್ಮನ್ನೆ ರತ್ನಾಕರ,ಅಭಯಚಂದ್ರ ಜೈನ್,ಮಂಜುನಾಥ ಭಂಡಾರಿ,ಎಂ.ಎ.ಗಫೂರ್,ಅಶೋಕ ಕುಮಾರ್ ಕೊಡವೂರು,ಹರೀಶ್ ಕುಮಾರ್,ಬಿ.ಎಂ.ಸುಕುಮಾರ ಶೆಟ್ಟಿ,ಸಾಗರ ಶಾಸಕ ಗೋಪಲಾಕೃಷ್ಣ ಬೇಳೂರು,ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಜಿ.ಎ ಭಾವಾ,ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಹಾಗೂ ಕಾಂಗ್ರೆಸ್ ವಂಡ್ಸೆ ಮತ್ತು ಬ್ಲಾಕ್ ಕಾಂಗ್ರೆಸ್ ಬೈಂದೂರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.
ಈ ಸಂದರ್ಭದಲ್ಲಿ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಸನ್ನ ಕುಮಾರ್ ಶೆಟ್ಟಿ,ಪರಮೇಶ್ವರ ಪೂಜಾರಿ,ಪದ್ಮಾವತಿ,ವೇದ ಬೈಂದೂರು ಮೊದಲಾದವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಪ್ರಸನ್ನ ಶೆಟ್ಟಿ ಕೆರಾಡಿ ಕಾರ್ಯಕ್ರಮ ನಿರ್ವಹಿಸಿದರು.
News/Giri shiruru