ಬೈಂದೂರು: ಅನೇಕ ಸಾರಿ ಸಹಜವಾಗಿ ಅನಿಸಿಬಿಡುತ್ತದೆ.ಕಳೆದ ಹತ್ತು ವರ್ಷಗಳಲ್ಲಿ ಕೆಲವು ತಾಲೂಕು ಕೇಂದ್ರದ ಅಭಿವ್ರದ್ದಿಯನ್ನು ಅವಲೋಕಿಸಿದಾಗ ಬ್ರಹ್ಮಾವರ ತಾಲೂಕು ಬೆಳವಣಿಗೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಸರಿಸಮನಾಗಿ ಬೆಳೆದು ಬಿಟ್ಟಿದೆ.ಕಾಪು,ಹೆಬ್ರಿ ದಿನದಿಂದ ದಿನಕ್ಕೆ ಪ್ರಗತಿಯ ವೇಗ ಹೆಚ್ಚಿಸಿಕೊಂಡಿದೆ.ಕಾರ್ಕಳ ಯಾವ ಜಿಲ್ಲಾ ಕೇಂದ್ರಕ್ಕೂ ಕಡಿಮೆಯಿಲ್ಲ.ಅಲ್ಲಿನ ಉದ್ಯಮ ಅವಕಾಶ ,ಅರ್ಥಿಕ ಬೆಳವಣಿಗೆ ಕಾರಣ ಸಹಕಾರಿಯಾಗಿರಬಹುದು.ಸದ್ಯದ ಪರಿಸ್ಥಿತಿಯಲ್ಲಿ ನಾವು ಹೋಲಿಸಿಕೊಂಡಾಗ ಬೈಂದೂರು ಒಂದಿಷ್ಟು ಭೌತಿಕ ಪ್ರಗತಿ ಸಂಭ್ರಮ ಹೇಳಿಕೊಂಡರು ಸಹ ತಾಲೂಕು ಕೇಂದ್ರವಾದ ಬಳಿಕ ಬೆಳೆಯುತ್ತಿರುವ ರೀತಿ ಮಾತ್ರ ಸಮಾಧಾನಕರವಾಗಿಲ್ಲ.ಕೆರೆ,ಕಟ್ಟೆ,ಸೇತುವೆ,ರಸ್ತೆಗಳ ಹೆಸರಲ್ಲಿ ಕೋಟಿಗಟ್ಟಲೆ ಪಟ್ಟಿಗಳನ್ನು ಜನಪ್ರತಿನಿಧಿಗಳು ಕೊಡುತ್ತಲೆ ಬಂದಿದ್ದಾರೆ.ವಾಸ್ತವವಾಗಿ ಜನಜೀವನ ಎಷ್ಟರ ಮಟ್ಟಿಗೆ ಬದಲಾಗಿದೆ ಎನ್ನುವುದನ್ನು ತುಲನೆಯಾಗಬೇಕಿದೆ.ಬೈಂದೂರಿನ ಬೆಳವಣಿಗೆ ಕಾಣಬೇಕಾಗಿರುವುದು ಪ್ರಗತಿ ಚಿಂತನೆಯ ಮಾನಸಿಕತೆಯಾಗಿದೆ.ಮಂಡ್ಯ,ಮೈಸೂರು,ಸೇರಿದಂತೆ ವಿವಿಧ ಹೊರ ಜಿಲ್ಲೆಗಳಲ್ಲಿ ಜನನಾಯಕರು ತಂದಿರುವ ಯೋಜನೆಗಳು ತಲೆತಲಾಂತರದವರೆಗೆ ಅವರ ಸಾಧನೆಯನ್ನು ಬಿಂಬಿಸುತ್ತದೆ.ಬೈಂದೂರಿನ ಮಟ್ಟಿಗೆ ಸಂಸದರ ಒಂದಿಷ್ಟು ಮಹತ್ವಕಾಂಕ್ಷೆಯ ಯೋಜನೆಗಳನ್ನು ಬಿಟ್ಟರೆ ಸದ್ಯ ತಾಲೂಕು ಆಡಳಿತ ಸೌಧ ಹೊರತುಪಡಿಸಿ ಮತ್ತೆಲ್ಲಾ ಅನುದಾನದ ಲೆಕ್ಕಕ್ಕೆ ಸ್ಥೀಮಿತ.
ಕಳೆದ ಅವಧಿಯಲ್ಲಿ ನೂರಾರು ಕೋಟಿ ಅನುದಾನದ ಕಿಂಡಿ ಅಣೆಕಟ್ಟುಗಳು ಗುತ್ತಿಗೆದಾರರಿಗೆ ಹಣ ಮಾಡಿಕೊಟ್ಟಿದೆ ಬಿಟ್ಟರೆ ಸನಿಹದ ರೈತರು ನಿತ್ಯ ಹಿಡಿಶಾಪ ಹಾಕುವಂತಾಗಿದೆ.ಹತ್ತಾರು ಕಿ.ಮೀ ಉಪ್ಪು ನೀರು ಸಿಹಿಯಾಗುತ್ತದೆ ಎಂದು ಕೋಟಿಯ ಮೇಲೆ ಕೋಟಿ ಅನುದಾನ ಹೆಚ್ಚಿಸಿದ ಸುಬ್ಬರಾಡಿ ವೆಂಟೆಂಡ್ ಡ್ಯಾಂ ಗುತ್ತಿಗೆದಾರರಿಗೆ ಸಿಹಿಯಾದರೆ ಜನರಿಗೆ ಮಾತ್ರ ಕಹಿಯಾಗಿ ಬಿಟ್ಟಿದೆ.ಇತ್ತೀಚೆಗೆ ವರಾಹಿ ಮತ್ತು ಸೌಕೂರು ಏತನೀರವಾವರಿಯ ನಂಬಿಕೆಯಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿ ಹಳ್ಳಿ ಹಳ್ಳಿಯಲ್ಲಿ ನಡೆಯುತ್ತಿದೆ.ಕೆಲವು ಕಡೆ ಪೈಪ್ ಇದ್ದರೆ ಇನ್ನೂ ಕೆಲವು ಕಡೆ ಹೊಂಡ ಮಾತ್ರ ಇದೆ.ಬೆಕ್ಕು ಬೂದಿಯಲ್ಲಿ ಅದೇನೋ ಮುಚ್ಚಿದ ಹಾಗೆ ಕೆಲಸ ನಡೆಯುತ್ತಿದೆ.ಪರಿಶೀಲನೆ ಮಾಡಲು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಅಧಿಕಾರಿಗಳು ಕೂಡ ಇಲ್ಲಾ.ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯ ಪೈಪ್‌ಲೈನ್ ನಳ್ಳಿಗಳಲ್ಲಿ ನೀರಿನ ಬದಲು ಗಾಳಿ ಬರದಿದ್ದರೆ ಸಾಕು.
ಬೈಂದೂರು ಅಂದಾಕ್ಷಣ ಜಂಕ್ಷನ್‌ನಿಂದ ಹೊಸ ಬಸ್ ನಿಲ್ದಾಣ ಸುತ್ತಿ ರಥಬೀದಿ ಸಂಪರ್ಕಗೊಳ್ಳುವುದರಲ್ಲಿ ತಾಲೂಕು ಕಾಣುತ್ತದೆ.ಸುಂದರ ಊರನ್ನು ಇಬ್ಬಾಗಗೊಳಿಸಿದ ಪ್ಲೈಓವರ್ ಮೇಲೆ ಬೈಂದೂರನ್ನು ಕಂಡಾಗ ನಾಲ್ಕು ಬಾರಿನ ಬಣ್ಣದ ಲೈಟ್‌ಗಳು ಕಾಣುತ್ತದೆ.ಇತ್ತೀಚೆಗೆ ಒಂದಿಷ್ಟು ಹೊಸ ಕಟ್ಟಡಗಳು ತಲೆ ಎತ್ತಿರುವುದು ಬೆಳವಣಿಗೆ ದೃಷ್ಟಿಯಲ್ಲಿ ಪೂರಕವಾದರು ಬೈಂದೂರಿನ ಮಟ್ಟಿಗೆ ಕಾಲೆಳೆಯುವ ಕಷ್ಟದಲ್ಲಿ ಹೊರಗಿನವರು ಬಂಡವಾಳ ಹೂಡುವುದಕ್ಕೆ ಹಿಂಜರಿಯುವಂತ ಪರಿಸ್ಥಿತಿಯಿದೆ.
ಇನ್ನು ಬೈಂದೂರಿನಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪ್ರಮುಖ ರಾಜಕೀಯ ಪಕ್ಷಗಳಾಗಿವೆ.ಮೇಲ್ಮಟ್ಟದ ನಾಯಕರು ಕಾರ್ಯಕರ್ತರೆದುರು ದುಶ್ಮನ್ ತೆರೆಮರೆಯಲ್ಲಿ ಎಡ್ಜ್‌ಸ್ಟ್‌ಮೆಂಟ್ ರಾಜಕೀಯ ಸಹಜವಾಗಿ ಎಲ್ಲರಿಗೂ ತಿಳಿದ ವಿಚಾರ ಎನ್ನುವ ಆರೋಪ ಕಾರ್ಯಕರ್ತರದ್ದು.ಬೈಂದೂರು ಬಿಜೆಪಿಯಲ್ಲಿ ಕ್ಷೇತ್ರಾಧ್ಯಕ್ಷರನ್ನು ಬದಲಿಸಬೇಕೆನ್ನುವ ಹೋರಾಟದ ತೆರೆಮರೆಯಲ್ಲಿ ಬಹಳಷ್ಟು ಕಸರತ್ತು ನಡೆದಿದೆ.ಕುರ್ಚಿ ಉಳಿಸಿಕೊಂಡ ಅಧ್ಯಕ್ಷರ ಪರಿಶ್ರಮ ಗ್ರೇಟ್ ಆದರೂ ಕೂಡ ಹಿನ್ನೆಡೆ ಕಂಡ ನಾಯಕರ ಒಳಗೊಳಗಿನ ಬೇಗುದಿ ಕುದಿಯುತ್ತಿದೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಎಲ್ಲರ ನೈಜತೆ ಬಿಂಬಿಸಬೇಕಾಗಿದೆ.ವಯಕ್ತಿಕ ಭಿನ್ನಾಭಿಪ್ರಾಯಗಳಿದ್ದರು ಕೂಡ ಪಕ್ಷದ ವಿಚಾರದಲ್ಲಿ ಸಹಜವಾಗಿ ಒಗ್ಗಟ್ಟಿನ ನಗೆ ಬೀರಬೇಕಾಗಿದೆ.ಸರಕಾರವಿಲ್ಲದ ಕಾರಣ ಅನುದಾನದ ಪೈಪೋಟಿಯಿಲ್ಲ.
ಇನ್ನು ಬೈಂದೂರು ಕಾಂಗ್ರೆಸ್ ಪಾಳಯದಲ್ಲಿ ಸದ್ಯದ ಮಟ್ಟಿದ ಚದುರಿದ ಚಿತ್ರವಾಗಿಬಿಟ್ಟಿದೆ.ಆಯಕಟ್ಟಿನ ಕುರ್ಚಿಗಾಗಿ ಕಸರತ್ತು ಸಹಜವಾಗಿದೆ.ಯುವ ಕಾರ್ಯಕರ್ತರಿಗೆ ಕೇಳುವವರಿಲ್ಲದ ಕೂಗು ಒಂದೆಡೆಯಾದರೆ ಮೂಲ ಕಾಂಗ್ರೆಸಿಗರು ಮತ್ತು ಸೇರ್ಪಡೆಯಾದವರ ಗುಂಪಿನ ನಡುವೆ ಶೀತಲ ಸಮರ ಇನ್ನೊಂದೆಡೆ.ಅದರಲ್ಲೂ ಸರಕಾರ ಇದ್ದರು ಮೂಲ ಕಾಂಗ್ರೆಸಿಗರ ಮಾತಿಗೆ ಕಿಮ್ಮತ್ತಿಲ್ಲ. ಅಧಿಕಾರಿಗಳು ಮತ್ತು ನಾಯಕರುಗಳು ಸೇರಿದಂತೆ ಸೇರ್ಪಡೆಯಾದವರ ಯಜಮಾನಿಕೆ ಉಸಿರುಕಟ್ಟಿಸುತ್ತಿದೆ ಸಣ್ಣಪುಟ್ಟ ಕೆಲಸಕ್ಕು ಕಿರಿಕಿರಿಯಾಗುತ್ತಿದೆ ಎನ್ನುವ ಕೂಗು ಕಾರ್ಯಕರ್ತರದ್ದಾಗಿದೆ.ಪಕ್ಷದ ನೂತನ ಕ್ಷೇತ್ರಾಧ್ಯಕ್ಷ ಎಲ್ಲರನ್ನು ವಿಶ್ವಾಸಕ್ಕೆ ಪಡೆಯಬೇಕಿದೆ.ದ್ವೇಷ ರಾಜಕಾರಣ ಸಹಜವಾಗಿಯೇ ಜನಸಾಮಾನ್ಯರ ಬದುಕಿಗೆ ಕಬ್ಬಿಣದ ಕಡಲೆಯಾದಂತಿದೆ.
ಇನ್ನು ಕಟ್ಟಡ ಕಾರ್ಮಿಕರು,ಕೂಲಿ ಜನರ ಬದುಕು ಸದ್ಯದ ಮಟ್ಟಿಗೆ ದುಸ್ಸರ ಹಳ್ನಾಡು,ಬಸ್ರೂರು,ತ್ರಾಸಿ,ಹೆಮ್ಮಾಡಿ ಭಾಗದಲ್ಲಿ ರಾಜಕೀಯ ನಾಯಕರ ಕೃಪಾಕಟಾಕ್ಷದಲ್ಲಿ ದಿನಕ್ಕೆ ನಾನೂರರಿಂದ ಐನೂರು ಲಾರಿ ಮರಳು ಸಾಗಾಟವಾಗುತ್ತಿದೆ.ಗಣಿ ಮಾಲಿಕರ ತಾಳಕ್ಕೆ ಇಲಾಖೆ ಕೂಡ ಕುಣಿಯುತ್ತಿದೆ.ಹೀಗಾಗಿ ಆ ಭಾಗದಲ್ಲಿ ಮರಳುಗಾರಿಕೆ,ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯವಹಾರ ಇದೆ.
ಬೈಂದೂರು ಭಾಗದಲ್ಲಿ ಆಪಕ್ಷ -ಈ ಪಕ್ಷದ ನಾಯಕರ ಪ್ರತಿಷ್ಠೆಯಲ್ಲಿ ನಡೆಯುತ್ತಿರುವ ಒಂದೆರಡು ಗಣಿಗಳು ಬಂದ್ ಮಾಡಿದ ಕಾರಣ ಜನಸಾಮಾನ್ಯರಿಗೆ ಕೆಲಸ ಇಲ್ಲಾ.ಕಟ್ಟಡ ಕಾಮಗಾರಿ ಕೂಡ ತಟಸ್ಥಗೊಂಡಿದೆ.ಜನರು ಕೂಡ ಕಾನೂನು ವ್ಯಾಪ್ತಿಯಲ್ಲಿ ಪರವಾನಗಿ ಪಡೆಯುವ ಮನಸ್ಸು ಮಾಡಿಲ್ಲದಿರುವುದು ಇವುಗಳಿಗೆ ಕಾರಣವಾಗಿದೆ.ಮರಳು ಲಾರಿ ಮಾಲಕರು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಪಡೆಯಬೇಕೆನ್ನುವ ಕ್ರಮವಿದ್ದರು ಸಹ ಒಂದೆರಡು ನಿಮಿಷ ಬುಕಿಂಗ್ ಸೈಟ್ ಓಪನ್ ಇರುತ್ತದೆ. ಬಹುತೇಕ ಅನಧೀಕೃತ ಸಾಗಾಟವೇ ಅಧಿಕವಾಗಿದೆ.ಬೈಂದೂರಿನಲ್ಲಿ ನಾಲ್ಕೈದು ಆಕ್ರಮ ಮರಳು ಸಾಗಾಟದ ಲಾರಿಗಳನ್ನು ಪತ್ತೆ ಹಚ್ಚಿದ ಬಳಿಕ ಮರಳು ಬುಕ್ಕಿಂಗ್ ಸೈಟ್ ಲಾರಿ ಮಾಲಕರಿಗೆ ಸಿಗುತ್ತಿದೆ.
ಸಮೃದ್ದ ಬೈಂದೂರಿನ ಅಭಿವೃದ್ದಿಯ ಕನಸನ್ನು ಕಂಡ ಶಾಸಕರು ಸರಕಾರದ ಅನುದಾನಗಳು ದೊರೆಯದಿದ್ದರು ಇರುವ ಅವಕಾಶಗಳನ್ನು ಬಳಸಿಕೊಂಡು ಇಲಾಖೆಗಳ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಪ್ರಯತ್ನ ಹಾಗೂ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ರಹಿತ ನಡೆ ಶ್ಲಾಘನೀಯ ಮತ್ತು ಉತ್ತಮ ಬೆಳವಣಿಗೆ.ಸರಳ ವ್ಯಕ್ತಿತ್ವ ಜನಪರ ಕಾರ್ಯದ ಹುಮ್ಮಸ್ಸು ಇನ್ನಷ್ಟು ಸಾಕಾರವಾಗಬೇಕಿದೆ.
ಬೈಂದೂರಿನ ಬೆಳವಣಿಗೆ ಅದು ಪ್ರತಿಯೊಬ್ಬರ ಕನಸು. ಎಲ್ಲೋ ಒಂದಿಬ್ಬರು ರಾಜಕಾರಣಗಳ ಸ್ವಾರ್ಥಕ್ಕೆ ತಾಲೂಕು ಕೇಂದ್ರದ ಭವಿಷ್ಯ ಕಟ್ಟುವ ಕನಸು ಕರಗಬಾರದೆನ್ನುವುದು ಸರ್ವರ ದ್ಯೇಯ.ತಾಲೂಕಿನ ಬೆಳವಣಿಗೆಗೆ ಸ್ವಾರ್ಥವಿಲ್ಲದ ಸಮಾಜದ ಇಚ್ಚಾಶಕ್ತಿ ಮುಖ್ಯ.ರಾಜಕೀಯ ಮರೆತು ತಾಲೂಕು ಕೇಂದ್ರದ ಭವಿಷ್ಯದ ಬೆಳವಣಿಗೆ ಗಮನದಲ್ಲಿರಿಸಿ ಪ್ರವಾಸೋಧ್ಯಮ,ಉದ್ಯಮ ಸೇರಿದಂತೆ ಇರುವ ಅವಕಾಶ ಸದ್ಬಳಕೆಯಾಗಬೇಕಾಗಿದೆ.ಜನಪರ ಕಾರ್ಯಗಳಿಗೆ ಸಹಕರಿಸಬೇಕಿದೆ.ಬಂದೂರನ್ನು ಅಭಿವೃದ್ದಿಯಲ್ಲಿ ಮುಂದುವರಿದ ತಾಲೂಕು ಕೇಂದ್ರಗಳಿಗೆ ಸರಿಸಮಾನಾಗಿ ಬೆಳೆಸಬೇಕಿದೆ.ಪ.ಪಂ ವ್ಯಾಪ್ತಿ ಸರಿಪಡಿಸಿ ರಾಜಕೀಯ ಮರೆತು ಸರಕಾರದ ಯೋಜನೆಗಳ ಅನುಷ್ಠಾನವಾಗಬೇಕು.ಸಾಹಿತ್ಯ,ಸಂಸ್ಕ್ರತಿ,ಶೈಕ್ಷಣಿಕವಾಗಿ ಬಹಳಷ್ಟು ಮುಂದಿರುವ ಬೈಂದೂರು ಅಭಿವೃದ್ದಿ ವಿಚಾರದಲ್ಲಿ ಮಾದರಿಯಾಗಲಿ.ಮುಂಬರುವ ದಿನಗಳು ಕನಸನ್ನು ನನಸಾಗಿಸಲು ಯುವ ಪೀಳಿಗೆ ಸಂಘಟಿತವಾಗಿ ಪ್ರಯತ್ನಿಸಬೇಕಾಗಿದೆ.ಬೇಸಿಗೆ ಬಿಸಿಲಿನ ಬಿಸಿಗಿಂತ ಇಲ್ಲಿನ ರಾಜಕೀಯ ಮಂಡೆಬಿಸಿ ಜಾಸ್ತಿ ಮರ್ರೆ ಅನ್ನೋದು ಸದ್ಯದ ಮಟ್ಟಿಗೆ ಜನರ ಬಾಯಿಮಾತಾಗಿದೆ.
ವೆಬ್ಬೇಶ್ ಶಿರೂರು.