ಬೈಂದೂರು: ಜಿಲ್ಲೆಯ ವಿವಿಧ ದಲಿತ ಸಂಘಟನೆ ಇದರ ವತಿಯಿಂದ ಶಿರೂರು ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾಭೂಮಿ ದಲಿತರಿಗೆ ನೀಡದೆ ದಲಿತರ ಸಾಂವಿಧಾನಿಕ ಹಕ್ಕುಗಳ ಕಗ್ಗೊಲೆ ಮಾಡಿದ ಉಡುಪಿ ಜಿಲ್ಲಾಡಳಿತದ ದಲಿತ ವಿರೋಧಿ ನಡವಳಿಕೆ ಖಂಡಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಬೈಂದೂರು ತಾಲೂಕು ಕಛೇರಿ ಎದುರುಗಡೆ ಆರಂಭಗೊಂಡಿತು.
ಉಪವಾಸ ಸತ್ಯಾಗ್ರಹದ ನೇತ್ರತ್ವ ವಹಿಸಿ ಮಾತನಾಡಿದ ದಲಿತ ಮುಖಂಡ ರಾಘವೇಂದ್ರ ಶಿರೂರು ಬೈಂದೂರು ಭಾಗದಲ್ಲಿ ಅಧಿಕಾರಿಗಳು ನಿರಂತರವಾಗಿ ದಲಿತರನ್ನು ನಿರ್ಲಕ್ಷಿಸುತ್ತಿದ್ದಾರೆ.ನಮ್ಮ ಬೇಡಿಕೆಗಳಿಗೆ ಕಾಟಾಚಾರಕ್ಕೆ ಸಮ್ಮತಿ ನೀಡಿ ಹಿಂಬದಿಯಲ್ಲಿ ಅತಿಕ್ರಮಣಕಾರರಿಗೆ ಸಹಕರಿಸಿ ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುತ್ತಿದ್ದಾರೆ.ಶಿರೂರಿನಲ್ಲಿ ಒತ್ತುವರಿಯಾಗಿರುವ ಡಿ.ಸಿ ಮನ್ನಾ ಭೂಮಿಯನ್ನು ತೆರವುಗೊಳಿಸಬೇಕು ಹಾಗೂ ಇದರಲ್ಲಿರುವ ಆಕ್ರಮ ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಬೇಕು.ಬೈಂದೂರು ತಾಲೂಕಿನಲ್ಲಿ 94ಸಿ ಮತ್ತು ಆಕ್ರಮ -ಸಕ್ರಮ ಹೆಸರಿನಲ್ಲಿ ದಲಿತರಿಗಾದ ಅನ್ಯಾಯ ಸರಿಪಡಿಸಿ ನಡೆದಿರುವ ಭೂ ಹಗರಣವನ್ನು ನ್ಯಾಯಾಂಗ ತನಿಖೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಧವ ಬಾಕಡ,ರಮೇಶ ಶಿರೂರು,ರಾಮ ಎಮ್.ಮಯ್ಯಾಡಿ,ಮಹಾಲಕ್ಷ್ಮೀ ಬೈಂದೂರು,ಈಶ್ವರ ಶಿರೂರು,ವಾಸುದೇವ ಶಿರೂರು ಮೊದಲಾದವರು ಹಾಜರಿದ್ದರು.