ಬೈಂದೂರು: ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ಘರ್‌ಘರ್ ಗಂಗಾಜಲ್ ಕಲ್ಪನೆಯ ಮನೆಮನೆಗೆ ಕುಡಿಯುವ ನೀರು ಸಂಪರ್ಕ ಯೋಜನೆ ತಾಲೂಕಿನಾದ್ಯಂತ ಪ್ರಗತಿಯಲ್ಲಿದೆ.ಸುಮಾರು 585 ಕೋಟಿ ರೂಪಾಯಿ ಅನುದಾನದ ಕಾಮಗಾರಿ ಇದಾಗಿದ್ದು ಗ್ರಾಮ ಮಟ್ಟದಲ್ಲಿ ಸ್ಥಳೀಯ ಗುತ್ತಿಗಾದಾರರು ಒಪ್ಪಂದದ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ.ಆದರೆ ಕಾಮಗಾರಿ ನಡೆಸುವ ಗುತ್ತಿಗೆದಾರರ ನಿರ್ಲಕ್ಷ ಮತ್ತು ಇಲಾಖೆಯ ಮೇಲುಸ್ತುವಾರಿ ಕೊರತೆಯಿಂದ ಪ್ರತಿ ಗ್ರಾಮದ ಒಳ ರಸ್ತೆಗಳು ಈ ಯೋಜನೆಗೆ ಬಲಿಯಾಗುವ ಸಾಧ್ಯತೆಗಳಿವೆ.ಮಾತ್ರವಲ್ಲದೆ ತರಾತುರಿಯಲ್ಲಿ ಕಾಮಗಾರಿ ಮುಗಿಸುವ ಪೈಪೋಟಿಯಲ್ಲಿ ಪೈಪ್‌ಲೈನ್‌ಗಾಗಿ ದೊಡ್ಡ ದೊಡ್ಡ ಕಂದಕಗಳನ್ನು ತೆರೆದು ಮಣ್ಣು ಮುಚ್ಚದ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ದೂಳುಮಯವಾಗುವಂತಾಗಿದೆ.ಹೀಗಾಗಿ ಮನೆ ಮನೆಗೆ ನೀರು ಕೊಡುವ ಮುನ್ನವೇ ಸಂಚರಿಸುವವರಿಗೆ ದೂಳು ತಿನ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗುತ್ತಿಗೆದಾರರು ಗ್ರಾಮ ಪಂಚಾಯತ್ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗಿಲ್ಲ.ಪ್ರತಿದಿನ ಶಾಲಾ ಮಕ್ಕಳು,ದನಕರುಗಳು ಕೂಡ ಚರಂಡಿ ದಾಟುವಾಗ ಅಪಾಯದ ಸಾಧ್ಯತೆಯಿದೆ.ಕೆಲವು ಕಡೆ ರಸ್ತೆ ಮೇಲೆ ಮಣ್ಣು ಹಾಕಲಾಗಿದೆ.ಹೀಗಾಗಿ ಇಲಾಖೆ ಶೀಘ್ರ ಗಮನಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಈ ಕುರಿತು ಪ್ರತಿಕ್ರಯಿಸಿದ ಸಹಾಯಕ ಇಂಜಿನಿಯರ್ ರಾಜ್‌ಕುಮಾರ್ ಈಗಾಗಲೇ ಶಿರೂರು ವ್ಯಾಪ್ತಿಯಲ್ಲಿ ಕಾಮಗಾರಿ ಆರಂಭಗೊಂಡಿದೆ.ಸಾರ್ವಜನಿಕರಿಗೆ ತೊಂದರೆಯಾಗದಂತೆ ಗುಣಮಟ್ಟದಲ್ಲಿ ಕಾಮಗಾರಿ ನಡೆಸಲು ಸಂಬಂಧಪಟ್ಟವರಿಗೆ ತಿಳಿಸುತ್ತೇನೆ ಎಂದರು.