ಬೈಂದೂರು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆ ಇದರ ರಜತ ಮಹೋತ್ಸವ ಆಚರಣೆಯ ಅಂಗವಾಗಿ ಹಾಗೂ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ ),ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಉಡುಪಿ ಜಿಲ್ಲೆ ಇವರ ತಂಡದಿಂದ ಅರಿವಿನ ಪಯಣ ಕಾರ್ಯಕ್ರಮ ಯು.ಬಿ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ಬೈಂದೂರಿನಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಅಲೆವೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವದ ಸಂಭ್ರಮದಲ್ಲಿದೆ.ಈ ನೆನಪಿಗಾಗಿ ಜಿಲ್ಲೆಯಾದ್ಯಂತ ಪ್ರತಿ ತಾಲೂಕು ಸಂಘಗಳ ಸಹಕಾರದಲ್ಲಿ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.ವೃತ್ತಿಯ ಜೊತೆಗೆ ಸಾಮಾಜಿಕ ಜವಬ್ದಾರಿ ಕೂಡ ಪತ್ರಕರ್ತರು ಅಳವಡಿಸಿಕೊಂಡು ಸಮಾಜ ಸುಧಾರಣೆಯ ಚಿಂತನೆಗಳ ಕಾರ್ಯಕ್ರಮ ಆಯೋಜಿಸುವ ಜೊತೆಗೆ ರಜತ ಮಹೋತ್ಸವಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಜತಮಹೋತ್ಸವ ಸಮಿತಿ ಸಂಚಾಲಕ ಮಹಮ್ಮದ್ ಷರೀಫ್ ಮಾತನಾಡಿ ನಮ್ಮ ದೇಶದಲ್ಲಿ ಮಹಿಳೆಗೆ ಶ್ರೇಷ್ಠ ಸ್ಥಾನಮಾನ ನೀಡಲಾಗಿದೆ. ಆದರೆ ವಾಸ್ತವದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಿದೆ. ಮಕ್ಕಳಿಗೆ ಎಳವೆಯಲ್ಲಿಯೇ ಅರಿವು ಮೂಡಿಸುವುದರಿಂದ ಇಂತಹ ಘಟನೆಗಳನ್ನು ತಗ್ಗಿಸಬಹುದು ಎಂದರು.
ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ತ್ರೀ ಪುರುಷ ಅರಿತು ಬದುಕಿದರೆ ಸುಖೀ ಬದುಕು ಸಾಧ್ಯವಿದೆ. ಪ್ರತಿಯೋರ್ವರಿಗೂ ತಮ್ಮದೇ ಆದ ಸಾಮರ್ಥ್ಯವಿದೆ. ಅದನ್ನು ಅರಿತು ಬದುಕುವುದು ಮುಖ್ಯ. ಮಹಿಳೆಯರ ಮೇಲೆ ಯಾವುದೇ ಬಗೆಯಲ್ಲಿ ದೌರ್ಜನ್ಯ ನಡೆದರೂ ಅದನ್ನು ಪ್ರತಿಭಟಿಸುವಂತಾಗಬೇಕು. ಹಾಗೆಯೇ ಮಹಿಳಾ ಪರ ಕಾನೂನುಗಳು ಸದ್ಬಳಕೆಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಯು.ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅಮಿತಾ ಶೆಟ್ಟಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಕೇಂದ್ರ ಸಮಿತಿ ಸದಸ್ಯೆ ವಾಣಿ ಮಂಗಳೂರು ಉಪಸ್ಥಿತರಿದ್ದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಪತ್ರಕರ್ತ ಕೃಷ್ಣ ಬಿಜೂರು ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರಕೃಪೆ:ಸುಪ್ರೀತ್ ಬೈಂದೂರು