ಬೈಂದೂರು; ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ಪಟ್ಟಣ ಪಂಚಾಯತ್‌ನಿಂದ ಮುಕ್ತಿ ನೀಡಬೇಕೆಂದು ಹೋರಾಟ ಸಮಿತಿ ವತಿಯಿಂದ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರಿಗೆ ಐನೂರಕ್ಕೂ ಅಧಿಕ ಗ್ರಾಮಸ್ಥರು ತೆರಳಿ ಮನವಿ ನೀಡಿದರು.
ಉದ್ಯಮಿ ನಾಗರಾಜ ಗಾಣಿಗ ಮಾತನಾಡಿ ಪಟ್ಟಣ ಪಂಚಾಯತ್ ನಿರ್ಣಯಕ್ಕೆ ನಮ್ಮ ವಿರೋಧವಿಲ್ಲ ಆದರೆ ಪಟ್ಟಣ ಪಂಚಾಯತ್ ಸೇರ್ಪಡೆಗೊಂಡಿರುವ ಹಳ್ಳಿಗಳಿಗೆ ಬಹಳ ತೊಂದರೆಯಾಗುತ್ತಿದೆ.ಹೀಗಾಗಿ ಗ್ರಾಮೀಣ ಭಾಗದ ಹಳ್ಳಿಗಳನ್ನು ಬೇರ್ಪಡಿಸಿ ಪ್ರತ್ಯೇಕ ಗ್ರಾ.ಪಂ ಆಗಿ ಮಾರ್ಪಡಿಸಬೇಕಿದೆ ಎಂದರು.
ಯಡ್ತರೆ ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ ನಾಕಟ್ಟೆ ಮಾತನಾಡಿ ಪಟ್ಟಣ ಪಂಚಾಯತ್ ನಿರ್ಣಯ ಕೇಳದೆ ಕೆಲವು ವ್ಯಕ್ತಿಗಳ ಸ್ವಾರ್ಥ ಚಿಂತನೆಯಾಗಿದೆ.ಮುಗ್ದ ಹಳ್ಳಿಗರಿಂದ ಪ್ರತಿ ಕೆಲಸಕ್ಕೆ ಲಂಚ ಪಡೆಯುವ ಅಧಿಕಾರಿಗೆ ಅನುಕೂಲವಾದಂತಿದೆ.ಗ್ರಾಮೀಣ ಭಾಗದ ಜನರಿಗೆ ನಿತ್ಯ ತೊಂದರೆಯಾಗುತ್ತಿದೆ.ಹೀಗಾಗಿ ಹಳ್ಳಿಗಳನ್ನು ಒಗ್ಗೂಡಿಸಿ ಪ್ರತ್ಯೇಕ ಗ್ರಾ.ಪಂ ರಚನೆ ಮಾಡಿದರೆ ಅನುಕೂಲವಾಗುತ್ತದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಪಟ್ಟಣ ಪಂಚಾಯತ್ ನಿರ್ಣಯ ಅವೈಜ್ಞಾನಿಕ ಚಿಂತನೆಯಾಗಿದೆ.ಇದರಿಂದ ಹಳ್ಳಿ ಭಾಗದ ಜನರಿಗೆ ತೊಂದರೆಯಾಗಿರುವುದು ಗಮನದಲ್ಲಿದೆ.ಈ ಕುರಿತು ಸರಕಾರದ ಗಮನ ಸೆಳೆಯಬೇಕಿದೆ.ಕೆಲವು ತಾಂತ್ರಿಕ ಸಮಸ್ಯೆಗಳನ್ನು ಅರಿತು ಗ್ರಾಮ ಪಂಚಾಯತ್‌ಗಳಾಗಿ ವಿಂಗಡಿಸುವ ಚಿಂತನೆಯಿದೆ.ಜನರ ಬೇಡಿಕೆಯನ್ನು ಸಚಿವರು,ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಮತ್ತು ಸಕಾರಾತ್ಮಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ನೇತ್ರತ್ವ ವಹಿಸಿದ್ದು ಮಾಜಿ ಶಾಸಕರು,ಶಾಸಕರು,ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಈ ಕುರಿತು ಮನವಿ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹೊಸೂರು,ತೂದಳ್ಳಿ,ಆಲಂದೂರು,ಕಡ್ಕೆ,ಗಂಗನಾಡು,ಗೋಳಿಬೇರು,ಕ್ಯಾರ್ಥೂರು ಸೇರಿದಂತೆ ಯಡ್ತರೆ ಹಾಗೂ ಬೈಂದೂರು ಗ್ರಾಮದ ಹಳ್ಳಿಭಾಗದ ಜನರು ಭಾಗವಹಿಸಿದ್ದರು.
ವರದಿ/ಗಿರಿ ಶಿರೂರು
ಚಿತ್ರ: ದೊಟ್ಟಯ್ಯ ಪೂಜಾರಿ ಶಬರಿ ಸ್ಟುಡಿಯೋ ಯಡ್ತರೆ