ಶಿರೂರು: ಜನರ ಸಮಸ್ಯೆಗಳಿಗೆ ಉತ್ತರಿಸಬೇಕಾದ ಅಧಿಕಾರಿಗಳು ಗೈರು ಹಾಜರಾದ ಕಾರಣ ಗ್ರಾಮಸಭೆ ಮುಂದೂಡಿದ ಘಟನೆ ಶಿರೂರು ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.ಬೈಂದೂರು ತಾಲೂಕು ಶಿರೂರು ಗ್ರಾಮ ಪಂಚಾಯತ್ ಅತ್ಯಂತ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.ಸರಕಾರ ಜನರ ಸಮಸ್ಯೆಗಳಿಗೆ ಇಲಾಖೆ ಸಮರ್ಪಕವಾಗಿ ಸ್ಪಂಸಸಬೇಕು ಎನ್ನುವ ಉದ್ದೇಶದಿಂದ ಗ್ರಾಮ ಮಟ್ಟದಲ್ಲಿ ಗ್ರಾಮಸಭೆಗಳನ್ನು ಆಯೋಜಿಸುತ್ತಿದೆ.ಆದರೆ ಮಾಹಿತಿ ನೀಡಬೇಕಾದ ಅಧಿಕಾರಿಗಳೆ ಗೈರಾಗಿರುವುದು ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿದೆ.ಮಾತ್ರವಲ್ಲದೆ ನಿಗಧಿಯಾದ ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಗ್ರಾ.ಪಂ ಸದಸ್ಯರು ಹಾಗೂ ಸಾರ್ವಜನಿಕರು ನೋಡೆಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಮಾತ್ರವಲ್ಲದೆ ಯಾವುದೇ ಇಲಾಖೆಯ ಜವಬ್ದಾರಿಯುತ ಅಧಿಕಾರಿಗಳು ಸಭೆಗೆ ಬಂದಿಲ್ಲ.ಅತ್ಯಂತ ದೊಡ್ಡ ಗ್ರಾಮ ವ್ಯಾಪ್ತಿಯಿದೆ.ಕಟಾವು ಸೇರಿದಂತೆ ಹತ್ತಾರು ಸಮಸ್ಯೆಗಳ ಅಹವಾಲು ಸಾರ್ವಜನಿಕರು ಅಧಿಕಾರಿಗಳಿಗೆ ನೀಡಲು ಕೆಲಸ ಕಾರ್ಯ ಬಿಟ್ಟು ಸಭೆಗೆ ಬಂದರೆ ಅಧಿಕಾರಿಗಳು ಬಾರದೇ ಯಾವುದಾದರು ನೆಪವಡ್ಡುತ್ತಿರುವುದರಿಂದ ಗ್ರಾಮ ಪಂಚಾಯತ್ ಅಭಿವೃದ್ದಿಯಾಗುವುದು ಹೇಗೆ ಜನರ ಸಮಸ್ಯೆ ಪರಿಹಾರ ಕಂಡುಕೊಳ್ಳುವುದಾದರು ಹೇಗೆ.ಹೀಗಾಗಿ ಜಿಲ್ಲಾಡಳಿತ ಗ್ರಾಮ ಪಂಚಾಯತ್ ಗ್ರಾಮ ಸಭೆಗೆ ಬಾರದಿರುವ ಅಧಿಕಾರಿಗಳ ಕುರಿತು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇದರಿಂದ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆಗ್ರಹಿಸಿ ಅಧಿಕಾರಿಗಳು ಬರುವವರೆಗೆ ಗ್ರಾಮಸಭೆ ಬಹಿಷ್ಕರಿಸುವುದಾಗಿ ತಿಳಿಸಿದರು.ಬಳಿಕ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಸಭೆಗೆ ಕಡ್ಡಾಯವಾಗಿ ಆಗಮಿಸಬೇಕು.ಹೀಗಾಗಿ ಅಧಿಕಾರಿಗಳು ಬಾರದ ಕಾರಣ ಗ್ರಾಮಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಹೇಳಿಕೆ.1
ಗ್ರಾಮಸಭೆ ಜನರ ಆಶೋತ್ತರಗಳಿಗೆ ಸ್ಪಂಧಿಸುವುದು ಮತ್ತು ಸಾರ್ವಜನಿಕರು ಅಧಿಕಾರಿಗಳನ್ನು ನೇರವಾಗಿ ಚರ್ಚಿಸಬಹುದಾದ ಸಭೆ.ಆದರೆ ಜವಬ್ದಾರಿಯುತ ಅಧಿಕಾರಿಗಳು ಗೈರಾದರೆ ಜನರ ಸಮಸ್ಯೆಯನ್ನು ಕೇಳುವುದಾದರು ಯಾರಲ್ಲಿ.ಹೀಗಾಗಿ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು……..ಉದಯ ಪೂಜಾರಿ ಮೈದಿನಪುರ,ಗ್ರಾ.ಪಂ ಸದಸ್ಯರು
ಹೇಳಿಕೆ.2
ಶಿರೂರು ಗ್ರಾಮಸಭೆಗೆ ಕಳೆದ ಹಲವು ಸಮಯದಿಂದ ಬಹುತೇಕ ಅಧಿಕಾರಿಗಳು ಸಭೆಗೆ ಬರುತ್ತಿಲ್ಲ.ಈ ಬಗ್ಗೆ ಹಲವು ಬಾರಿ ನಿರ್ಣಯ ಕೈಗೊಂಡಿದ್ದೇವೆ.ಆದರೂ ಸಹ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ.ಇದು ಶಿರೂರಿನ ಬಗ್ಗೆ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ.ಹೀಗಾಗಿ ಮೇಲಾಧಿಕಾರಿಗಳು ಗ್ರಾಮಸಭೆಯ ಔಚಿತ್ಯ ಜನಸಾಮಾನ್ಯರಿಗೆ ತಲುಪಿಸಲು ಪ್ರಯತ್ನಿಸಬೇಕು……..ಕಾಪ್ಸಿ ನೂರ್‌ಮಹ್ಮದ್ ಉಪಾಧ್ಯಕ್ಷರು ಗ್ರಾ.ಪಂ ಶಿರೂರು
ಹೇಳಿಕೆ.3
ಪ್ರತಿ ಗ್ರಾಮಸಭೆಯಲ್ಲಿ ಅಧಿಕಾರಿಗಳಿಂದ ಸರಿಯಾದ ಸ್ಪಂಧನೆ ದೊರೆಯುತ್ತಿಲ್ಲ.ಹೀಗಾಗಿ ಗ್ರಾಮಸಭೆ ಕೇವಲ ಕಾಟಾಚಾರದ ಸಭೆಯಂತಾಗುತ್ತಿದೆ.ಈ ಹಿಂದೆ ಕೂಡ ಹಲವು ಬಾರಿ ತಿಳಿಸಲಾಗಿದೆ.ಭತ್ತ ಕಟಾವಿನ ಸಮಯ ಜೊತೆಗೆ ಹಲವು ಇಲಾಖೆಗಳಿಂದ ಮಾಹಿತಿ ನೀಡಬೇಕಾದ ಅವಶ್ಯಕತೆಯಿದೆ.ಹೀಗಾಗಿ ಅಧಿಕಾರಿಗಳೆ ನಿರ್ಲಕ್ಷ ವಹಿಸಿದರೆ ಸಾರ್ವಜನಿಕರಿಗೆ ಸರಕಾರದ ಯೋಜನೆ ತಲುಪಿಸುವುದಾದರು ಹೇಗೆ……..ರವೀಂದ್ರ ಶೆಟ್ಟಿ ಹೊಸ್ಮನೆ, ಅಧ್ಯಕ್ಷರು ರೈತ ಸಂಘ ಶಿರೂರು
News/Giri shiruru