ಬೈಂದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಶುಕ್ರವಾರ ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ಬೈಂದೂರು ತಾಲೂಕು ಕಚೇರಿ ಎದುರು ಭಾರಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ಮಂಡಲ ರೈತಮೋರ್ಚಾ ಅಧ್ಯಕ್ಷ ಸುಧಾಕರ ಕುಲಾಲ್ ಹಿಂದೆ ಜಿಜೆಪಿ ಸರ್ಕಾರ ರೈತರಿಗೆ ಪ್ರತಿವರ್ಷ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡುತ್ತಿದ್ದ ನಾಲ್ಕು ಸಾವಿರ ರೂಪಾಯಿ ಅನುದಾನ ತಡೆ ಹಿಡಿಯಲಾಗಿದೆ. ರೈತ ಮಕ್ಕಳ ಹಿತದೃಷ್ಟಿಯಿಂದ 11 ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ 438.69 ಕೋಟಿ ನೆರವು ಕೂಡಾ ತಡೆಹಿಡಿಯಲಾಗಿದೆ. ಭೂ ಸಿರಿ ಯೋಜನೆ ಕೈಬಿಡಲಾಗಿದೆ. ಶ್ರಮಶಕ್ತಿ, ರೈತ ಸಂಪದ ಯೋಜನೆ, ಪ್ರತಿ ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಸ್ಥಗಿತಗೊಳಿಸಿದ್ದಲ್ಲದೇ ಕೃಷಿ ಭೂಮಿ ಮಾರಾಟ ಕಾಯಿದೆಯಲ್ಲಿ ಪುನಃ ತಿದ್ದುಪಡಿ ಮಾಡಿ ರೈತರಿಗೆ ದ್ರೋಹ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ರೈತರ ಹೊಲ, ಗದ್ದೆಗಳಿಗೆ ಮತ್ತು ಬೆಳೆಗೆ ನೀರಿಲ್ಲದೇ ಒಣಗಿ ಹೋಗಿರುವುದರಿಂದ ಬತ್ತಿ ಗದ್ದೆಗಳಿಗೆ ಕೆರೆಗಳಿಂದ ನೀರುಣಿಸಲು ವಿದ್ಯುತ್ ಅಗತ್ಯವಿದ್ದು, ದುರದೃಷ್ಟವಶಾತ್ ಮೆಸ್ಕಾಂನವರು ಅನಿಯಮಿತ ಲೋಡ್ ಶೆಡ್ಡಿಂಗ್ ಮಡುತ್ತಿರುವುದರಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡುವಂತೆ ಅಗ್ರಹಿಸಿದರು.
ಬಳಿಕ ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಯವರಿಗೆ ಮನವಿ ಸಲ್ಲಿಸಲಾಯಿತು ಹಾಗೂ ತಹಶೀಲ್ದಾರರು ಜಿಲ್ಲಾಽಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಕಮಲೇಶ್, ರೈತಮೋರ್ಚಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಆರ್‍ಮಕ್ಕಿ, ಸಂಘಟನಾ ಕಾರ್ಯದರ್ಶಿ ಪಾಂಡುರಂಗ ನಾಯ್ಕ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್‌ಕುಮಾರ್ ಶೆಟ್ಟಿ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಸುರೇಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ ಕಾಲ್ತೋಡು, , ತಾ.ಪಂ ಮಾಜಿ ಉಪಾಧ್ಯಕ್ಷೆ ಮಾಲಿನಿ ಕೆ. ಮೊದಲಾದವರು ಉಪಸ್ಥಿತರಿದ್ದರು.