ಬೈಂದೂರು: ರಾಣಿಬಲೆ ಮೀನುಗಾರರ ಒಕ್ಕೂಟ(ರಿ.) ಉಪ್ಪುಂದ ಇದರ ಮೀನುಗಾರಿಕೆ ಸಚಿವರು ಹಾಗೂ ಬೈಂದೂರು ಕ್ಷೇತ್ರದ ನೂತನ ಶಾಸಕ ಗುರುರಾಜ ಗಂಟಿಹೊಳೆ ಯವರಿಗೆ ಅಭಿನಂದನಾ ಸಮಾರಂಭ ಉಪ್ಪುಂದ ಕೊಡೇರಿ ಕಿರು ಬಂದರಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದದ ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು ಕಳೆದ ಐದು ವರ್ಷದಲ್ಲಿ ಹಿಂದಿನ ಸರಕಾರ ಮೀನುಗಾರರಿಗೆ ಮಂಜೂರಾದ ಯಾವುದೇ ಯೋಜನೆಗಳನ್ನು ಮೀನುಗಾರರಿಗೆ ಸಮರ್ಪಕವಾಗಿ ನೀಡಿಲ್ಲ.ಕೇಂದ್ರ ಸರಕಾರ ಕೂಡ ಮೀನುಗಾರರಿಗೆ ಕೇವಲ ಆಶ್ವಾಸನೆ ಮಾತ್ರ ನೀಡಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಭರವಸೆ ನೀಡಿದ ಎಲ್ಲಾ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಟಾನಗೊಳಿಸಿದೆ.ನನಗೆ ನೀಡಿದ ಸಚಿವ ಸ್ಥಾನ ಕರಾವಳಿ ಮೀನುಗಾರರಿಗೆ ದೊರೆತಿರುವ ಮಾನ್ಯತೆ.ಹೀಗಾಗಿ ಮೀನುಗಾರರ ಬೇಡಿಕೆಗಳಿಗೆ ಸಮರ್ಪಕವಾಗಿ ಸ್ಪಂಧಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಈಗಾಗಲೇ ಬೈಂದೂರು ಕ್ಷೇತ್ರದ ಮೀನುಗಾರರ ಹಲವು ಬೇಡಿಕೆಗಳು ಬಾಕಿ ಉಳಿದಿದೆ.ನೂತನ ಸಚಿವರು ಬೈಂದೂರು ಕ್ಷೇತ್ರಕ್ಕೆ ಆದ್ಯತೆ ನೀಡಿ ಕನಿಷ್ಟ ನೂರು ಮೀನುಗಾರಿಕಾ ಮನೆಗಳನ್ನು ನೀಡಬೇಕು ಹಾಗೂ ಬಂದರು ನಿರ್ಮಾಣ ಯೋಜನೆಗೆ ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್,ಕಾಂಗ್ರೆಸ್ ಮುಖಂಡ ಎಸ್.ರಾಜು ಪೂಜಾರಿ,ಬೈಂದೂರು ತಹಶೀಲ್ದಾರ ಶ್ರೀಕಾಂತ,ಉಪ್ಪುಂದ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ,ಆನಂದ ಖಾರ್ವಿ,ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ,ಕಾರ್ಯದರ್ಶಿ ಸುರೇಶ ಖಾರ್ವಿ ಮೊದಲಾದವರು ಹಾಜರಿದ್ದರು.
News/pic: Giri shiruru