ಬೈಂದೂರು: ಲಾವಣ್ಯ (ರಿ.) ಬೈಂದೂರು, ರೋಟರಿ ಕ್ಲಬ್ ಬೈಂದೂರು ಹಾಗೂ ಸಮನ್ವಿತ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೈಂದೂರು ರೋಟರಿ ಭವನದಲ್ಲಿ ಸದ್ಯೋಜಾತರ ವಾಚಕ್ನವೀ ಮತ್ತು ಜಿತ್ವರೀ ಕೃತಿಗಳ ಲೋಕಾರ್ಪಣೆ ಸಮಾರಂಭ ನಡೆಯಿತು.ಚಿಂತಕ ರೋಹಿತ್ ಚಕ್ರತೀರ್ಥ ಅವರು ವಾಚಕ್ನವೀ ಮತ್ತು ಜಿತ್ವರೀ ಕೃತಿಗಳ ಲೋಕಾರ್ಪಣೆಗೈದು ಮಾತನಾಡಿ ಭಾರತೀಯ ವಾಗ್ಮಿಯ ಬಹುವಾಗಿ ಋಷಿ ಪರಂಪರೆ ಆವರಿಸಿಕೊಂಡಿದೆ ಅದನ್ನು ಬಿಟ್ಟು ಭಾರತೀಯ ಸಾಹಿತ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಋಷಿ ಪರಂಪರೆಯನ್ನು ಭಾರತೀಯತೆಯಿಂದ ಪ್ರತ್ಯೇಕಿಸುದೆಂದರೆ ಮಣ್ಣು – ಬೇರು ಬೇರ್ಪಡಿಸಿದಂತೆ.ಋಷಿಗಳೆಂದರೆ ಸಮಾಜದಿಂದ ದೂರ ಇರುವವರು ಎಂಬ ತಪ್ಪು ಕಲ್ಪನೆ ಇದೆ. ಆದರೆ ಸಮಾಜದ ಭಾಗವಾಗಿಯೇ ಇದ್ದು, ಮಾರ್ಗದರ್ಶನ ಮಾಡುತ್ತಾ ಲೌಕಿಕ ಸುಖಗಳನ್ನು ತ್ಯಜಿಸಿ ಬದುಕಿದವರು. ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಇರುವ ಅಸಡ್ಡಯೇ ಋಷಿ ಪರಂಪರೆಯ ಅಪಹಾಸ್ಯಕ್ಕೆ ಕಾರಣ.ಪ್ರತಿ ಮುನಿಯ ಜೀವನ ಚರಿತ್ರೆಯಲ್ಲಿಯೂ ಬಹುದೊಡ್ಡ ಆದರ್ಶವಿದೆ. ಅಂತಹ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡೋಣ ಎಂದರು.
ಲೇಖಕ, ಸಂಶೋಧಕ ಸದ್ಯೋಜಾತ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಲಾವಣ್ಯ (ರಿ.) ಬೈಂದೂರು ಅಧ್ಯಕ್ಷ ಬಿ.ನರಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ರೋಟರಿ ಕ್ಲಬ್ ನಿಕಟಪೂರ್ವಾಧ್ಯಕ್ಷ ಹರೆಗೋಡು ಉದಯ್ ಆಚಾರ್ ಪ್ರಾರ್ಥಿಸಿದ್ದರು.ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ್ ಪ್ರಭು ಶಿರೂರು ಸ್ವಾಗತಿಸಿದರು. ಬೈಂದೂರು ರೋಟರಿ ಸದಸ್ಯ ಗೋವಿಂದ ಕೆರ್ಗಾಲ್ ಕಾರ್ಯಕ್ರಮ ನಿರ್ವಹಿಸಿದರು.ಲಾವಣ್ಯ ಕಾರ್ಯದರ್ಶಿ ಹರೆಗೋಡು ವಿಶ್ವನಾಥ ಆಚಾರ್ ವಂದಿಸಿದರು.