ಬೈಂದೂರು: ಬೈಂದೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ನಾಮಪತ್ರ ಸಲ್ಲಿಕೆ ಹಾಗೂ ಬೈಕ್ ರ್‍ಯಾಲಿಗೆ ಜನಸಾಗರವೇ ಹರಿದು ಬಂದಂತಿದೆ.ತ್ರಾಸಿಯಿಂದ ಆರಂಭಗೊಂಡ ಬೈಕ್ ರ್‍ಯಾಲಿ ಯಡ್ತರೆ ಬೈಪಾಸ್‌ನಿಂದ ಬೈಂದೂರು ಹೊಸ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಮೂಲಕ ಬರಲಾಯಿತು.ಈ ಸಂದರ್ಭದಲ್ಲಿ ಅಸಂಖ್ಯೆ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವ ಮೂಲಕ ಕಾಂಗ್ರೇಸ್ ಶಕ್ತಿ ಪ್ರದರ್ಶನ ಬಿಂಬಿಸಿದರು.ಬಳಿಕ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆ.ಗೋಪಾಲ ಪೂಜಾರಿಯವರು ಬೈಂದೂರು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ.ಅಧಿಕಾರ ಇದ್ದಾಗಲು ಹಾಗೇ ಅಧಿಕಾರ ಕಳೆದುಕೊಂಡಾಗಲು ಜನರ ಸೇವೆಗೆ ಸದಾ ನನ್ನನ್ನು ಮುಡುಪಾಗಿರಿಸಿಕೊಂಡು ಕ್ಷೇತ್ರದ ಸೇವೆ ಮಾಡಿದ್ದೇನೆ.ಬೈಂದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಕನಸಿನಲ್ಲಿ ತಾಲೂಕು ಕೇಂದ್ರಕ್ಕೆ ಅವಶ್ಯ ಇರುವ ಎಲ್ಲಾ ಕಛೇರಿಗಳನ್ನು ಬೈಂದೂರಿಗೆ ನನ್ನ ಅವಧಿಯಲ್ಲಿ ತಂದಿದ್ದೇನೆ.ಶಾಸಕನಾಗಿದ್ದ ಅವಧಿಯಲ್ಲಿ ನನ್ನ ಕ್ಷೇತ್ರ ಅಭಿವೃದ್ದಿಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಗಳಿಸಿತ್ತು ಎಂದರು.
ಬಿಜೆಪಿಯವರ ಹಕ್ಕಿ ಉಪ್ಪುನೀರು ಕುಡಿಯುತ್ತದೆ ಎಂದು ನನಗೆ ಗೊತ್ತಿಲ್ಲ: ಕಳೆದ ಐದು ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದ್ದರೂ ಕೂಡ ಬೈಂದೂರು ಬಸ್ ಡಿಪೋ ಉದ್ಘಾಟನೆಯ ಭಾಗ್ಯ ಕಂಡಿಲ್ಲ.ನಾನು ಶಾಸಕನಾಗಿರುವ ವೇಳೆ ಯಡ್ತರೆ ಸಮೀಪದ ಕೆರೆಯ ಜಾಗದಲ್ಲಿ ಡಿಪೋ ನಿರ್ಮಿಸಲು ಮುಂದಾದಾಗ ಬಿಜೆಪಿ ಪಕ್ಷದವರು ಅದು ಹಕ್ಕಿ ನೀರು ಕುಡಿಯುವ ಜಾಗ ಎಂದು ವಿರೋಧಿಸಿದ್ದರು ಬಳಿಕ ಅದು ಉಪ್ಪು ನೀರಿನ ಕೆರೆ ಎಂದು ತಿಳಿದಿದೆ.ಮಾತ್ರವಲ್ಲದೆ ಬಿಜೆಪಿ ಶಾಸಕರು ಪುನಃ ಗುದ್ದಲಿ ಪೂಜೆ ನಡೆಸಿದರು.ಬಿಜೆಪಿಯವರ ಹಕ್ಕಿ ಉಪ್ಪು ನೀರು ಕುಡಿಯುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ಲೇವಡಿ ಮಾಡಿದರು.
ಗ್ಯಾಸ್ ಬೆಲೆ ಹತ್ತು ರೂಪಾಯಿ ಜಾಸ್ತಿ ಆದಾಗ ಗಂಟಲು ಹರಿದುಕೊಂಡ ಶೋಭಕ್ಕ ಈಗೆಲ್ಲಿದ್ದಾರೆ ಪೂಜಾರಿ ವ್ಯಂಗ್ಯ: ಕೇಂದ್ರದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರ ಇದ್ದ ಸಂದರ್ಭದಲ್ಲಿ ಸೆಬ್ಸಿಡಿ ಜೊತೆಗೆ 10 ರೂಪಾಯಿ ಏರಿಕೆ ಆಗಿದ್ದಾಗ ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ಈಗಿನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜಿ ಗ್ಯಾಸ್ ಸಿಲಿಂಡರ್ ತಂದು ಅಡುಗೆ ಮಾಡಿ ಪ್ರತಿಭಟನೆಯಲ್ಲಿ ಗಂಟಲು ಹರಿಯುವಂತೆ ಕೂಗಿದ್ದರು.ಈಗ ಸಾವಿರ ದಾಟಿದೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ನಮ್ಮ ಶೋಭಕ್ಕ ಈಗೇಲಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಕೋಟ ಶ್ರೀನಿವಾಸ ಪೂಜಾರಿ ಬೈಂದೂರು ಕ್ಷೇತ್ರದ ಜನರ ಕ್ಷಮೆ ಕೇಳಬೇಕು: ನಾನು ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ.ಒಂದು ಬಾರಿಯು ಚುನಾವಣೆ ಎದುರಿಸದ ಸಚಿವ ಕೋಟ ನನ್ನನ್ನು ಭಯೋತ್ಪಾದಕ ಎಂದಿದ್ದಾರೆ.ಸ್ವಾಮಿ ನಿಮ್ಮದೇ ಪಕ್ಷದ ಉದಯ ಗಾಣಿಗನ ಕೊಲೆ ಬಿಜೆಪಿಯವರು ಮಾಡಿದಾಗ ನಿಮ್ಮದೇ ಪಕ್ಷದವರು ಜೋಡಿ ಕೊಲೆ ಮಾಡಿದಾಗ,ಪರೇಶ್ ಮೇಸ್ತ ಕೊಲೆ ಎಂದು ಜನರಿಗೆ ಸುಳ್ಳು ಹೇಳಿ ಅಧಿಕಾರ ಪಡೆದ ನಿಮಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲಾ.ಹಿಂಬಾಗಿಲ ರಾಜಕೀಯ ಮಾಡುವ ನಿಮ್ಮಿಂದ ಬೈಂದೂರು ಜನರು ಸರಳತೆಯ ಪಾಠ ಕಲಿಯಬೇಕಿಲ್ಲ.ನೀವು ಕೇವಲ ನನ್ನೊಬ್ಬನಿಗಲ್ಲ ಸಮಸ್ತ ಬೈಂದೂರು ಕ್ಷೇತ್ರದ ಜನತೆಗೆ ಕ್ಷಮೆ ಕೇಳಬೇಕು ಎಂದರು ಮತ್ತು ನಿಮ್ಮ ಮಾತು ನೋವು ತಂದಿದೆ ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಯುವ ನಾಯಕ ವಿಕಾಸ್ ಹೆಗ್ಡೆ,ಪ್ರಕಾಶ್ಚಂದ್ರ ಶೆಟ್ಟಿ,ಸಂಪಿಗೇಡಿ ಸಂಜೀವ ಶೆಟ್ಟಿ,ರಘುರಾಮ ಶೆಟ್ಟಿ,ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಪ್ರಕಾಶ್ಚಂದ್ರ ಶೆಟ್ಟಿ,ಎಸ್.ರಾಜು ಪೂಜಾರಿ,ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮದನ್ ಕುಮಾರ್,ಪ್ರಚಾರ ಸಮಿತಿಯ ಸುಬ್ರಹ್ಮಣ್ಯ ಭಟ್,ಮಹಿಳಾ ಮೋರ್ಚಾದ ಗೌರಿ ದೇವಾಡಿಗ,ಯುವ ಕಾಂಗ್ರೇಸ್ ಅಧ್ಯಕ್ಷ ಶೇಖರ ಪೂಜಾರಿ,ವಿಜಯ್ ಶೆಟ್ಟಿ ಕಾಲ್ತೋಡು,ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಮೊದಲಾದವರು ಹಾಜರಿದ್ದರು.
ವರದಿ/ಚಿತ್ರ: ಗಿರೀಶ್ ಶಿರೂರು