ಬೈಂದೂರು,ಸೆ,28: ರೋಟರಿ ಕ್ಲಬ್ ಬೈಂದೂರು ಇದರ ಸಂಯೋಜಕತ್ವದಲ್ಲಿ ‘ಮನೆಯಂಗಳದಲ್ಲಿ ಮಾತುಕತೆ’ ಹಾಗೂ ಪರಿಸರ ಸ್ನೇಹಿ ‘ಇ-ವೇಸ್ಟ್ ಅಭಿಯಾನ’ ಕಾರ್ಯಕ್ರಮ ಉಪ್ಪುಂದದ ರೋಟರಿ ಜಿಲ್ಲೆ 3182 ರ ಮಾಜಿ ಅಸಿಸ್ಟೆಂಟ್ ಗವರ್ನರ್ ರೋಟೇರಿಯನ್ ಐ. ನಾರಾಯಣ್ ಅವರ ಮನೆಯಂಗಳದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಜಿ.ಪಂ ಸದಸ್ಯ ಎಸ್. ಮದನ್ ಕುಮಾರ್ ಅವರು ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ಇ-ತ್ಯಾಜ್ಯಗಳ (E-Waste) ವೈಜ್ಞಾನಿಕ ವಿಲೇವಾರಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಗಳ ಜೊತೆಗೆ ಪರಿಸರ ಕಾಳಜಿಯ ಇಂತಹ ಜನಪರ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಸದಸ್ಯರ ನಡುವೆ ಸೌಹಾರ್ದತೆ ಬೆಸೆಯಲು ‘ಮನೆಯಂಗಳದಲ್ಲಿ ಮಾತುಕತೆ’ ಉತ್ತಮ ವೇದಿಕೆಯಾಗಿದ್ದು, ಸಂಸ್ಥೆಯ ಮುಂದಿನ ಸೇವಾ ಯೋಜನೆಗಳಿಗೆ ಪೂರಕವಾಗಿದೆ ಎಂದರು.
ರೋಟೇರಿಯನ್ ಐ.ನಾರಾಯಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬೈಂದೂರಿನ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಉಪ್ಪುಂದದ ಸಾರ್ವಜನಿಕರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಬೈಂದೂರು ಕಾರ್ಯದರ್ಶಿ ಎಸ್. ಮಣಿಕಂಠ ಬೈಂದೂರು ಸ್ವಾಗತಿಸಿ ಕಾರ್ಯಕ್ರಮನಿರ್ವಹಿಸಿದರು.