ಬೈಂದೂರು; ಟೈಲರಿಂಗ್ ವೃತ್ತಿ ಸ್ವಾವಲಂಬನೆಯ ಹಾದಿಯಲ್ಲಿ ದೊಡ್ಡ ಪಾತ್ರ ನಿರ್ವಹಿಸಿದೆ.ಒಂದು ಹೊಲಿಗೆ ಯಂತ್ರವನ್ನು ನಂಬಿಕೊಂಡು ಸಂಸಾರದ ಜೀವನ ನಡೆಸುತ್ತಿಸುತ್ತಿರುವ ಇವರ ಶ್ರಮ ಶ್ಲಾಘನೀಯವಾಗಿದೆ.ಇದರ ಜೊತೆಗೆ ತಮ್ಮ ಮನೆಯ ಜವಬ್ದಾರಿಗಳನ್ನು ನಿಭಾಯಿಸಿ ಕರ್ತವ್ಯ ಪಾಲಿಸಿದಾಗ ಯಶಸ್ಸು ಸಾಧ್ಯ ಹಾಗೂ ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಅನನ್ಯವಾಗಿದೆ ಎಂದು ಉದ್ಯಮಿ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.)ಉಪ್ಪುಂದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು ಅವರು ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್(ರಿ.)ಮಂಗಳೂರು,ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಬೈಂದೂರು ಕ್ಷೇತ್ರ ಸಮಿತಿ ಇದರ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದದ ವತಿಯಿಂದ ಉಪ್ಪುಂದ ದೇವಕಿ ಆರ್.ಸಭಾಂಗಣದಲ್ಲಿ ಆಯ್ದ 12 ಆಸಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ದಿ ನಿಗಮದ ನಿರ್ದೇಶಕಿ ಗೀತಾಂಜಲಿ ಸುವರ್ಣ ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಬಹುಮುಖ್ಯವಾಗಿದೆ.ಹಲವು ಕಾರ್ಯದ ಮೂಲಕ ಕುಟುಂಬ ಹಾಗೂ ಸಮಾಜವನ್ನು ಎದುರಿಸುವ ಮಹಿಳೆಯ ಪಾತ್ರ ತ್ಯಾಗದ ಸಂಕೇತವಾಗಿದೆ ಮಹಿಳೆಗೆ ಎಲ್ಲ ಕಡೆಗಳಲ್ಲಿಯೂ ಸಾಮಾಜಿಕ ನ್ಯಾಯ ಸಿಗುವಂತಾಗಲಿ. ಕುಟುಂಬದ ಕೇಂದ್ರ ಬಿಂದುವಾಗಿರುವ ಮಹಿಳೆಗೆ ಸ್ಥಾನ-ಮಾನ, ಗೌರವದ ಜತೆಗೆ ಪೂಜ್ಯ ಭಾವನೆಯಿಂದ ಕಾಣುವ ಸಂಸ್ಕೃತಿ ನಮ್ಮದಾಗಿದೆ ಎಂದರು.
ಕೆ.ಎಸ್.ಟಿ.ಎ ಬೈಂದೂರು ಕ್ಷೇತ್ರ ಸಮಿತಿ ಅಧ್ಯಕ್ಷ ರಾಜು ಕೊಲ್ಲೂರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕೆ.ಎಸ್.ಟಿ.ಎ ರಾಜ್ಯ ಸಮಿತಿ ಕೋಶಾಧ್ಯಕ್ಷ ರಾಮಚಂದ್ರ ಉಡುಪಿ, ಕೆ.ಎಸ್.ಟಿ.ಎ ಜಿಲ್ಲಾಧ್ಯಕ್ಷ ಗುರುರಾಜ್ ಶೆಟ್ಟಿ, ಕೆ.ಎಸ್.ಟಿ.ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಪಾಲನ್,ಟೈಲರ್‍ಸ್ ಕೋ-ಆಪರೇಟಿವ್ ಅಧ್ಯಕ್ಷ ದಯಾನಂದ ಕೋಟ್ಯಾನ್ ಹಾಗೂ ವಿವಿಧ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 12 ಹೊಲಿಗೆ ಯಂತ್ರಗಳನ್ನು ಕೊಡಮಾಡಿದ ಉದ್ಯಮಿ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.)ಉಪ್ಪುಂದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಯವರನ್ನು ಕೆ.ಎಸ್.ಟಿ.ಎ ಬೈಂದೂರು ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.
ಕೆ.ಎಸ್.ಟಿ.ಎ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ನಾಗೇಂದ್ರ ಟೈಲರ್ ಸಮ್ಮಾನ ಪತ್ರ ವಾಚಿಸಿದರು.ಆಶಾ ದಿನೇಶ್ ಸ್ವಾಗತಿಸಿದರು.ನಾಗರಾಜ ಪಿ.ಯಡ್ತರೆ ಕಾರ್ಯಕ್ರಮ ನಿರ್ವಹಿಸಿದರು.ರಾಜು ಟೈಲರ್ ವಂದಿಸಿದರು.
News/pic; Giri shiruru