ಬೈಂದೂರು: ಬಹುನಿರೀಕ್ಷಿತ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನದಲ್ಲಿ ಘೋಷಣೆಯಾಗುವ ಹಂತದಲ್ಲಿದೆ.ರಾಜ್ಯ ಹಾಗೂ ಕ್ಷೇತ್ರ ಮಟ್ಟದಲ್ಲಿ ಈಗಾಗಲೇ ನಾಯಕರುಗಳು,ಆಕಾಂಕ್ಷಿಗಳು,ಪಕ್ಷದ ಮುಖಂಡರು ಪಕ್ಷ ಸಂಘಟನೆ ಮತ್ತು ಸಿದ್ದತೆಯಲ್ಲಿದ್ದಾರೆ.ಕಾರ್ಯಕರ್ತರು ಚುನಾವಣೆಯ ದಿನಾಂಕ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.ಬೇಸಿಗೆಯ ತಾಪ ಹೆಚ್ಚಾದಂತೆ ಈ ಬಾರಿ ಚುನಾವಣೆ ಕಾವು ಕೂಡ ಹೆಚ್ಚುತ್ತಿದೆ.
ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಬಹುಮುಖ್ಯ ಪ್ರಾದಾನ್ಯತೆ ಪಡೆದಿರುವುದು ಬೈಂದೂರು ಕ್ಷೇತ್ರದ ಹೆಗ್ಗಳಿಕೆಯಾಗಿದೆ.ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸ್ಪರ್ಧೆ ಸ್ಪಷ್ಟವಾಗಿದೆ.ಪಕ್ಷ ಸಂಘಟನೆ ಸೇರಿದಂತೆ ಪ್ರಚಾರದ ವಿವಿಧ ಮಜಲುಗಳಲ್ಲಿ ಉತ್ತಮ ಸಿದ್ದತೆ ನಡೆಯುತ್ತಿದೆ.ಆದರೆ ಬೈಂದೂರು ಕ್ಷೇತ್ರದ ಬಿಜೆಪಿ ಪಾಳಯದಲ್ಲಿ ಮಾತ್ರ ದಿನದಿಂದ ದಿನಕ್ಕೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ.ಇದುವರೆಗೆ ಅಭ್ಯರ್ಥಿಗಳ ಹೆಸರು ಅಧೀಕೃತವಾಗಿ ಅಂತಿಮಗೊಂಡಿಲ್ಲ.ಹಾಲಿ ಶಾಸಕರಿಗೆ ಮತ್ತೆ ಅವಕಾಶ ಸಿಗುತ್ತದೆ ಎನ್ನುವ ಸುದ್ದಿ ಇದ್ದರೂ ಕೂಡ ರಾಜ್ಯ ಹಾಗೂ ರಾಷ್ಟ್ರ ನಾಯಕರು ಬೈಂದೂರು ಕ್ಷೇತ್ರಕ್ಕೆ ಬಂದರು ಕೂಡ ಸ್ಪಷ್ಟಗೊಳಿಸದ ಕಾರಣ ಈ ಬಾರಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ಕೊಡುವುದು ಬಹುತೇಕ ನಿರೀಕ್ಷೆ ಮೂಡಿಸಿದೆ.ಹೀಗಾಗಿ ಈ ಬಾರಿ ಬೈಂದೂರು ಕ್ಷೇತ್ರಕ್ಕೆ ಉಡುಪಿ ಜಿ.ಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಬಾಬು ಶೆಟ್ಟಿ ಯವರಿಗೆ ಟಿಕೆಟ್ ದೊರೆಯುತ್ತದೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದೆ ಹಾಗೂ ಸೀಟ್ ಗ್ಯಾರಂಟಿ ಎನ್ನುವ ಆತ್ಮ ವಿಶ್ವಾಸ ಬಾಬು ಹೆಗ್ಡೆಯವರ ಬೆಂಬಲಿಗರಲ್ಲಿ ಕೇಳಿ ಬರುತ್ತಿದೆ.ಈಗಾಗಲೇ ಸಂಸದರು ಸೇರಿದಂತೆ ಬೆಂಗಳೂರಿನಲ್ಲಿ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರನ್ನು ಬೇಟಿ ಮಾಡಿದ್ದು ಆಕಾಂಕ್ಷಿಗಳ ಪಟ್ಟಿಯಲ್ಲಿ ಬಹುತೇಕ ಮುಂಚೂಣಿಯಲ್ಲಿದ್ದಾರೆ ಹಾಗೂ ಬಿರುಸಿನ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಹಿರಿಯ ನಾಯಕರ ಗ್ರೀನ್ ಸಿಗ್ನಲ್ ಕೂಡ ದೊರೆದಂತಿದೆ.
ಕೆ.ಬಾಬು ಶೆಟ್ಟಿಯವರಿಗೆ ಟಿಕೆಟ್ ಸಿಗಲು ಕಾರಣಗಳೇನು: ಬೈಂದೂರಿನಲ್ಲಿ ಬಿಜೆಪಿ ಆರಂಭದಲ್ಲಿ ಈಗಿರುವಂತೆ ಇರಲಿಲ್ಲ.ಜನಸಂಘ ಬಿಜೆಪಿ ಪಕ್ಷವಾಗಿ ರಚನೆಯಾದಾಗ ಬೈಂದೂರಿನಲ್ಲಿ ಮಹಾಬಲೇಶ್ವರ ಹೊಳ್ಳರು,ಚೆನ್ನಕೇಶವ ಉಪಾದ್ಯಾಯರಂತವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.ಐ.ಎಮ್.ಜಯರಾಮ ಶೆಟ್ಟಿಯವರ ಕಾಲದಲ್ಲಿ ಸಂಘಟನೆಯಾದ ಬಳಿಕ ಮತ್ತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಅಧಿಕವಾಗಿತ್ತು.ಕೆ.ಲಕ್ಷ್ಮೀನಾರಾಯಣ ರವರು ವಿಜಯ ಸಾಧಿಸಿದಾಗ ಬಿಜೆಪಿ ಪಾಳಯದಲ್ಲಿ ಬೆರಳೆಣಿಕೆಯ ಕಾರ್ಯಕರ್ತರಷ್ಟೆ ಮುಂಚೂಣಿಯಲ್ಲಿದ್ದರು.ಈ ಎಲ್ಲಾ ಹಂತದಲ್ಲೂ ಬಿಜೆಪಿ ಪಾಳಯದಲ್ಲಿ ಗಟ್ಟಿಯಾಗಿ ನಿಂತವರು ಕೆ.ಬಾಬು ಶೆಟ್ಟಿ ಯವರಾಗಿದ್ದಾರೆ.ಉದ್ಯೋಗದಲ್ಲಿದ್ದಾಗಲು ಪಕ್ಷಕ್ಕಾಗಿ ಇವರ ಶ್ರಮ ಅಪಾರ ಎನ್ನುವುದು ಹಿರಿಯ ಕಾರ್ಯಕರ್ತರಿಗೆ ತಿಳಿದ ವಿಚಾರವಾಗಿದೆ.ಬಳಿಕ ಉದ್ಯೋಗಕ್ಕೆ ನಿವೃತ್ತಿ ಘೋಷಿಸಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಇವರು ಬೈಂದೂರು ಕ್ಷೇತ್ರದ ಬಿಜೆಪಿಯ ಹಿರಿಯ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ.ಸಂಘಟನೆ ಸಾಮರ್ಥ್ಯ ಹಾಗೂ ಇತರ ವಿಷಯಗಳಲ್ಲಿ ಬಾಬು ಶೆಟ್ಟಿಯವರ ಹೆಸರು ಮುಂಚೂಣಿಯಲ್ಲಿದೆ.ಶಾಸಕರ ಕಾರ್ಯ ವೈಖರಿಯಿಂದ ಬೇಸತ್ತು ಬಂದರು ಈ ಭಾಗದ ಕಾರ್ಯಕರ್ತರು ಹಾಗೂ ಪಕ್ಷದ ಹಿರಿಯರು ಕೆ.ಬಾಬು ಶೆಟ್ಟಿಯವರಿಗೆ ಟಿಕೆಟ್ ನೀಡಬೇಕೆಂದು ಗಟ್ಟಿ ದ್ವನಿಯಲ್ಲಿ ಒತ್ತಾಯಿಸುತ್ತಿದ್ದಾರೆ.ಇತ್ತೀಚೆಗೆ ಸಂಸದರನ್ನು ಬೇಟಿ ನೀಡಿದ ಸಂದರ್ಭದಲ್ಲಿ ಬಾಬು ಶೆಟ್ಟಿಯವರ ಜೊತೆ ಮಾತುಕತೆ ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಜೊತೆ ಹಲವು ಸಭೆ ನಡೆದಿರುವುದು ಇನ್ನಷ್ಟು ಪುಷ್ಟಿ ನೀಡಿದೆ.ಈಗಿರುವ ಅಂಶಗಳ ಪ್ರಕಾರ ಬೈಂದೂರು ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಕೆ.ಬಾಬು ಶೆಟ್ಟಿ ಹೆಸರು ಬಹುತೇಕ ಖಚಿತಗೊಂಡಿದೆ.ಬಾಬು ಶೆಟ್ಟಿಯವರ ರಾಜಕೀಯ ಅದೃಷ್ಟ ಕೂಡ ಖುಲಾಯಿಸಬೇಕಾಗಿದೆ.
ಇದರ ಜೊತೆಗೆ ಬಿಜೆಪಿಯಲ್ಲಿನ ವಿವಿಧ ಪರ-ವಿರೋಧ ನಿಲುವುಗಳು ಕ್ಷೇತ್ರಾಧ್ಯಕ್ಷರು ಹಾಗೂ ಇವರ ನಡುವಿನ ಶೀತಲ ಸಮರ,ಶಾಸಕರ ಪ್ರತಿಷ್ಟೆ ಇವೆಲ್ಲವೂ ಕೂಡ ಕೊನೆಯ ಹಂತದಲ್ಲಿ ಪರಿಣಾಮ ಬೀರುವ ಸಾದ್ಯತೆಗಳಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಹಾಗೂ ಹಿರಿಯ ನಾಯಕರು ಕೊನೆಯ ಹಂತದಲ್ಲಿ ಕೆಲವೊಂದು ಬದಲಾವಣೆ ಆಗುವ ಸಾಧ್ಯತೆ ಹೊರತುಪಡಿಸಿದರೆ ಕೆ.ಬಾಬು ಶೆಟ್ಟಿ ಹೆಸರು ಬಹುತೇಕ ಅಂತಿಮಗೊಂಡಿದೆ.ಮಾತ್ರವಲ್ಲದೆ ಕೊನೆಯ ಹಂತದಲ್ಲಿ ಜಿಲ್ಲಾ ಮಟ್ಟದ ಹಿರಿಯ ಸಂಘಟಕರು ಕೂಡ ಬೈಂದೂರಿನಲ್ಲಿ ಅವಕಾಶ ಪಡೆಯುವುದನ್ನು ಕೂಡ ತಳ್ಳಿ ಹಾಕುವಂತಿಲ್ಲ.ಒಟ್ಟಾರೆಯಾಗಿ ಬೈಂದೂರು ಕ್ಷೇತ್ರದ ಬಿಜೆಪಿ ಪಾಳಯದಲ್ಲಿ ಅಭ್ಯರ್ಥಿ ಸ್ಥಾನ ಯಾರಿಗೆ ದೊರೆಯುತ್ತಿದೆ ಎನ್ನುವುದೇ ಬಹುದೊಡ್ಡ ಕುತೂಹಲವಾಗಿ ಮಾರ್ಪಟ್ಟಿದೆ.ಬಾಬು ಶೆಟ್ಟಿಯವರ ತಂಡ ಚುರುಕಿನ ಪ್ರಚಾರ ಕೈಗೊಂಡಿದೆ.
News/Shiruru news.com