ಬೈಂದೂರು,ಜೂ.20: ಹಲವು ವರ್ಷಗಳಿಂದ ರೈತರು, ಜನಸಾಮಾನ್ಯರು ಮತ್ತು ಸಾರ್ವಜನಿಕರ ಹಿತಾಶಕ್ತಿಯಿಂದ ಕೆಲವೊಂದು ಇಲಾಖೆಗಳನ್ನು ಸರಕಾರದ ಸ್ವಾಮ್ಯದಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು.ಜನರಿಗೆ ಅತ್ಯವಶ್ಯಕವಾದ ಮೆಸ್ಕಾಂ ಇಲಾಖೆಯನ್ನು ಖಾಸಗಿಯವರಿಗೆ ನೀಡುತ್ತಿರುವ ತಯಾರಿ ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಹೇಳಿದರು ಅವರು ಶನಿವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಒಟ್ಟು 19 ಜಿಲ್ಲೆಗಳಲ್ಲಿ ಅತ್ಯಧಿಕ ಲಾಭ ಇರುವ ವಿದ್ಯುತ್ ಇಲಾಖೆಯನ್ನು ಟಾಟಾ ಸಂಸ್ಥೆಗೆ ನೀಡುವ ಸಿದ್ದತೆ ನಡೆಸುತ್ತಿರುವುದು ಮುಂದಿನ ದಿನದಲ್ಲಿ ಸಾರ್ವಜನಿಕರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ.ಹಂತ ಹಂತವಾಗಿ ರೈತರಿಗೆ ಸಿಗುತ್ತಿರುವ ಸೌಲಭ್ಯಗಳು ಇದರಿಂದಾಗಿ ವಂಚಿತವಾಗಲಿದೆ.ಹೀಗಾಗಿ ವಿದ್ಯುತ್ ಇಲಾಖೆ ಖಾಸಗೀಕರಣ ಸಲ್ಲದು.ಸರಕಾರ ಈ ನಿರ್ಣಯ ಪರಿಶೀಲಿಸದಿದ್ದರೆ ರಾಜ್ಯವ್ಯಾಪಿ ರೈತರು ಸಿಡಿದೇಳಲಿದ್ದಾರೆ.ಕೇಂದ್ರ ಹಾಗೂ ರಾಜ್ಯ ಸರಕಾರ ಈ ಬಗ್ಗೆ ಗಮನಹರಿಸಬೇಕು ಎಂದರು.
ಜೂ.25 ರಂದು ಬೆಳಿಗ್ಗೆ ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ನೀಡಲಾಗುವುದು
ಪೆಟ್ರೋಲ್ ಪಂಪ್‌ಗಳಲ್ಲಿ ರೈತರಿಗೆ ಸಹಕರಿಸಬೇಕು: ಗಲ್ಪ್‌ರಾಷ್ಟ್ರದ ಯುದ್ದ ಈಗಾಗಲೇ ಅಂತ್ಯ ಕಂಡಿದೆ.ಪೆಟ್ರೋಲ್ ಪಂಪ್‌ಗಳಿಗೆ ಬರುವ ಗ್ರಾಮೀಣ ಭಾಗದ ರೈತರಿಗೆ ಪೆಟ್ರೋಲ್, ಡಿಸೇಲ್ ಕೊರತೆಯಿಂದ ಕ್ಯಾನ್‌ಗಳಲ್ಲಿ ಹಾಗೂ ಬಾಟಲಿಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ನೀಡುತ್ತಿಲ್ಲ. ಕೃಷಿ, ಉಳುಮೆ ಯಂತ್ರ,ಕೃಷಿ ಪಂಪ್‌ಸೆಟ್ ಹಲವಾರು ಯಂತ್ರಗಳಿಗೆ ಪೆಟ್ರೋಲ್, ಡಿಸೇಲ್ ನೀಡಬೇಕು ಮತ್ತು ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಪದ್ಮಾಕ್ಷ ಗೋಳಿಬೇರು ಹಾಜರಿದ್ದರು.
ವರದಿ/ಗಿರಿ ಶಿರೂರು