ಬೈಂದೂರು: ಒಂದು ಉತ್ತಮ ಯೋಜನೆ ಮಂಜೂರು ಮಾಡಿಸಿಕೊಳ್ಳುವುದು ಸಮರ್ಥ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯ.ಊರು ಅಭಿವೃದ್ದಿಯಾಗಬೇಕಾದರೆ ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳ್ಳಬೇಕು ಬೈಂದೂರಿನಲ್ಲಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಪುರಭವನ ಬೈಂದೂರಿನ ಅಭಿವ್ರದ್ದಿ ಧ್ರಷ್ಟಿಯಿಂದ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ರವರ ದೂರದೃಷ್ಟಿತ್ವದ ಯೋಜನೆಯಾಗಿದೆ.ಇದರಿಂದ ಬೈಂದೂರು ಇನ್ನಷ್ಟು ಪ್ರಗತಿಯಾಗಲಿದೆ.ಎಲ್ಲೋ ಕುಳಿತು ಕಮೆಂಟ್ ಮಾಡಿ ಪ್ರಚಾರ ಪಡೆಯುವ ಹಪಹಪಿಕೆಗಿಂತ ವಾಸ್ತವತೆ ಅರಿತು ಮಾತಾಡಲಿ ಎಂದು ಪುರಭವನ ನಿರ್ಮಾಣ ಮಾಡಲು ವಿರೋಧಿಸುವವರಿಗೆ ಮತ್ತು ಅಪಪ್ರಚಾರ ಮಾಡುವವರಿಗೆ ಜಿ.ಪಂ ಮಾಜಿ ಸದಸ್ಯ ಕೆ.ಬಾಬು ಶೆಟ್ಟಿ ಖಡಕ್ ಉತ್ತರ ನೀಡಿದರು.ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬೈಂದೂರಿನಲ್ಲಿ ನೂರು ಹಾಸಿಗೆಯ ಆಸ್ಪತ್ರೆಯ ನಿರ್ಮಾಣಕ್ಕೆ 2.11 ಎಕರೆ ಜಾಗ, ನ್ಯಾಯಾಲಯ ನಿರ್ಮಾಣಕ್ಕೆ 2.32 ಎಕರೆ ಜಾಗ,ಕೈಗಾರಿಕ ಪ್ರದೇಶಕ್ಕೆ 50 ಎಕರೆ ಎಕರೆ ಸ್ಥಳ ಜಾಗ, ವೈದ್ಯಕೀಯ ಕಾಲೇಜು ಸ್ಥಾಪನೆಗೆ 11 ಎಕರೆ ಜಾಗ ಕಾಯ್ದಿರಿಸಲಾಗಿದೆ. 3.48 ಎಕರೆ ಸ್ಥಳದಲ್ಲಿ ಕ್ರೀಡಾ ಇಲಾಖೆ ಹೆಸರಿನಲ್ಲಿ ಜಾಗ ಕೂಡ ಕಾಯ್ದಿರಿಸಲಾಗಿದೆ. ಸುಮಾರು 4.95 ಕೋಟಿ ಅನುದಾನದಲ್ಲಿ ಮೊಗೇರಿ ಅಡಿಗರ ಹೆಸರಿನ ಸುಂದರವಾದ ಪುರಭವನ ಬೈಂದೂರಿಗೆ ಇನ್ನಷ್ಟು ಪ್ರಸಿದ್ದಿ ತರಲಿದೆ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಉಪಯೋಗವಾಗಲಿದೆ.
ಇತ್ತೀಚೆಗೆ ಮೊಗೇರಿ ಅಡಿಗರ ಹೆಸರಿನ ಪುರಭವನದಿಂದ ಗಾಂಧಿ ಮೈದಾನದ ವ್ಯಾಪ್ತಿ ಕಡಿಮೆಯಾಗುತ್ತದೆ.ಕ್ರೀಡೆಗೆ ಹಾಗೂ ಇತರ ಚಟುವಟಿಕೆಗೆ ತೊಂದರೆಯಾಗುತ್ತದೆ ಎಂದು ಅಭಿವೃದ್ದಿ ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ.ಜೊತೆಗೆ ಸುಖಾಸುಮ್ಮನೆ ಕಪೋಕಲ್ಪಿತ ಕಥೆ ಕಟ್ಟಿ ಪ್ರಚಾರ ಪಡೆಯುವ ಜೊತೆಗೆ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ.ಹೀಗಾಗಿ ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಯ ಮುಖ್ಯಸ್ಥರಿಗೆ ಅಧಿಕಾರಿಗಳ ಜೊತೆ ಸ್ಥಳದ ವಿವರ ನೀಡಲಾಗಿದೆ.ಶಾಸಕರು ಕೂಡ ಪುರಭವನ ನಿರ್ಮಾಣದ ಸ್ಥಳಕ್ಕೆ ಬೇಟಿ ನೀಡಿದ್ದಾರೆ.ಇದು ಮೈದಾನದ ಒಂದು ಮೂಲೆಯಲ್ಲಿ ನಿರ್ಮಾಣವಾಗುವುದರಿಂದ ಯಾವುದೇ ರೀತಿಯಲ್ಲಿ ಈಗಿರುವ ವ್ಯವಸ್ಥೆಗೆ ತೊಂದರೆಯಾಗುವುದಿಲ್ಲ ಎಂದರು.
ಸುಳ್ಳು ಸುದ್ದಿ ಹರಡುವವರು ವಾಸ್ತವತೆ ಅರಿಯಲಿ: ಪ್ರಥ್ವಿ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್ ಮಾತನಾಡಿ ಈಗಿರುವ ಯೋಜನೆ ಪ್ರಕಾರ ಮೈದಾನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಅನಗತ್ಯವಾಗಿ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ ಹರಡುವವರು ವಾಸ್ತವತೆ ಅರಿಯಲಿ ಅಥವಾ ಮಾಹಿತಿ ಬೇಕಿದ್ದರೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕೇಳಿ ಪಡೆಯಲಿ.ಒಂದು ಉತ್ತಮ ಯೋಜನೆಯಿಂದ ಊರಿನ ಪ್ರಗತಿ ಹೆಚ್ಚುತ್ತದೆ ಎನ್ನುವುದನ್ನು ಅರಿಯಲಿ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಪಡುವರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸದಾಶಿವ ಡಿ.ಪಡುವರಿ,ಸಹಕಾರ ಭಾರತೀಯ ಪ್ರಸನ್ನ ಉಪ್ಪುಂದ,ಉದ್ಯಮಿ ವೆಂಕಟೇಶ ಕಿಣಿ,ಗೋವಿಂದ ಮಟ್ನಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
News/Girish shiruru