ಬೈಂದೂರು; ಜನಸಾಮಾನ್ಯರಿಗೆ ಅನುಕೂಲವಾಗಬೇಕು.ಪ್ರತಿ ಗ್ರಾಮದ ಮನೆ ಮನೆಗೂ ನೀರು ದೊರೆಯಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಯೋಜನೆ ಬೈಂದೂರು ಕ್ಷೇತ್ರದಲ್ಲಿ ಬ್ರಹತ್ ಭ್ರಷ್ಟಾಚಾರ ನಡೆಸಿದೆ.ಯಾವುದೇ ಗ್ರಾಮಕ್ಕೂ ಹನಿ ನೀರು ನೀಡದೆ ಒಟ್ಟು ಅನುದಾನದ 80% ಹಣ ಗುತ್ತಿಗೆದಾರರಿಗೆ ಪಾವತಿಯಾಗಿದೆ.ಕೋಟ್ಯಾಂತರ ರೂಪಾಯಿ ಹಣ ಗುಳುಂ ಆಗಿದೆ.ಇದು ಬೈಂದೂರು ವಿಧಾನಸಭಾ ಕ್ಷೇತ್ರದ ಬ್ರಹ್ಮಾಂಡ ಭ್ರಷ್ಟಾಚಾರ ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಬೈಂದೂರು ತಾಲೂಕು ರೈತ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ರೈತ ಸಂಘ ಕಳೆದ 170 ದಿನಗಳಿಂದ ಅನಿಧಿ೯ಷ್ಟಾವಧಿ ಹೋರಾಟ ನಡೆಸುತ್ತಿದೆ.ಈಗಾಗಲೇ ನಡೆಯಬೇಕಿದ್ದ ಪಟ್ಟಣ ಪಂಚಾಯತ್ ಚುನಾವಣೆ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಸಚಿವರ ಜೊತೆ ಮಾತನಾಡಿದ್ದು ಕೆಲವು ತಾಂತ್ರಿಕ ಅಂಶಗಳು ಸರಿಪಡಿಸಿ ಶೀಘ್ರ ನ್ಯಾಯ ನೀಡುವುದಾಗಿ ತಿಳಿಸಿದ್ದಾರೆ.
ಇದರ ನಡುವೆ ಬೇಸಿಗೆ ಸಮೀಪಿಸಿದೆ.ಪ್ರತಿ ಗ್ರಾಮದಲ್ಲೂ ಕುಡಿಯುವ ನೀರಿಗಾಗಿ ಹಾಹಾಕಾರ ನಡೆಯುತ್ತಿದೆ.ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 198 ಕೋಟಿ ಅನುದಾನ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 585 ಕೋಟಿ ಅನುದಾನ ಈ ಕ್ಷೇತ್ರಕ್ಕೆ ದೊರೆತಿದೆ.ಅವುಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿಯಲ್ಲಿ 80% ಹಣ ಅನುದಾನ ಗುತ್ತಿಗೆದಾರರಿಗೆ ಪಾವತಿಯಾಗಿದೆ.ಆದರೆ ಯಾವುದೇ ಗ್ರಾಮದಲ್ಲೂ ಯಾವುದೇ ಮನೆಗಳಿಗೂ ನೀರು ಕೊಟ್ಟಿಲ್ಲ.ಮಾತ್ರವಲ್ಲದೆ ಸಂಪೂರ್ಣ ಕಳಪೆ ಕಾಮಗಾರಿ ನಡೆಸಿದ್ದು.ಟೆಂಡರ್‌ನಲ್ಲಿರುವ ಪೈಪ್‌ಗಳನ್ನು ಬಿಟ್ಟು ಕಳಪೆ ಪೈಪ್‌ಗಳನ್ನು ಅಳವಡಿಸಲಾಗಿದೆ.ಹೌಸ್ ಪೈಪ್‌ಲೈನ್ ಮಾಡದೇ ಪಂಚಾಯತ್ ನಳ್ಳಿಗಳಿಗೆ ಸಂಪರ್ಕ ನೀಡಲಾಗಿದೆ.ಇದರಿಂದಾಗಿ ಪಂಚಾಯತ್ ನೀರು ಸಿಗುತ್ತಿಲ್ಲ.ಯೋಜನೆಯ ಲಾಭವು ಸಿಗುತ್ತಿಲ್ಲ.ಕೆಲವು ಪಂಚಾಯತ್‌ಗಳಿಗೆ ಹಾಗೂ ಅಲ್ಲಿನ ಜನಪ್ರತಿನಿಧಿಗಳಿಗೆ ಇದರ ಮಾಹಿತಿಯೆ ಇಲ್ಲವಾಗಿದೆ.ಇದು ಅಧಿಕಾರಿಗಳು ಮತ್ತು ವ್ಯವಸ್ಥೆ ಜನರಿಗೆ ಮಾಡಿದ ಮಹಾಮೋಷ ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕಿದೆ.ರೈತ ಸಂಘ ಈ ಬಗ್ಗೆ ಪ್ರತಿ ಗ್ರಾಮ ಗ್ರಾಮಗಳಿಗೂ ತೆರಳಿ ಜನರಿಗೆ ಮಾಹಿತಿ ನೀಡಿ ಹಗರಣದ ಬಗ್ಗೆ ಜನಜಾಗೃತಿ ಮೂಡಿಸಲಿದೆ.ಮಾತ್ರವಲ್ಲದೆ ಸಮಗ್ರವಾದ ಮಾಹಿತಿ ಪಡೆದು ಲೋಕಾಯುಕ್ತ ದೂರು ನೀಡಲಿದೆ ಎಂದರು.ಪ್ರತಿ ಗ್ರಾಮದಲ್ಲೂ 3 ರಿಂದ 7 ಕೋಟಿ ಅನುದಾನ ಹೋಗಿದೆ.ಕೆಲವು ಗ್ರಾಮಗಳ ಎನ್.ಓ.ಸಿ ಕೂಡ ನೀಡಿದೆ.ಈ ಹಗರಣದಲ್ಲೂ ಅಧಿಕಾರಿಗಳು, ಇಂಜಿನಿಯರ್,ಪಿ.ಡಿ.ಓ ಎಲ್ಲರೂ ಕೂಡ ಶಾಮೀಲಾಗಿದ್ದಾರೆ.59 ಗ್ರಾಮದಲ್ಲಿ 4 ವರ್ಷದಿಂದ ಕಾಮಗಾರಿ ನಡೆಸುತ್ತಿದ್ದರು ಇದುವರೆಗೆ ಪೂರ್ಣಗೊಂಡಿಲ್ಲ.ವಾರಾಯಿ ಯಿಂದ ಬೈಂದೂರಿಗೆ ನೀರು ತರುವ ಯೋಜನೆಗೆ ಜಲಮೂಲವೆ ಸಿಕ್ಕಿಲ್ಲ. ಇದೊಂದು ದೊಡ್ಡ ಮಟ್ಟದ ಬ್ರಹತ್ ಹಗರಣವಾಗಿದೆ.ಪ್ರತಿ ಗ್ರಾಮದಲ್ಲೂ ಸಾರ್ವಜನಿಕರ ಸಹಕಾರದಲ್ಲಿ ಇದರ ವಿರುದ್ದ ಹೋರಾಟ ನಡೆಸಲಿದ್ದೇವೆ ಎಂದರು.
ಬೆಳೆಸಾಲ, ಅಡಮಾನ ರೈತರಿಗೆ ತೊಂದರೆ, 9/11 ಪ್ರಾಧಿಕಾರಿಕ್ಕೆ ರೈತ ಸಂಘದಿಂದ ಮುತ್ತಿಗೆ; ಈಗಾಗಲೇ ಪ್ರಾಧಿಕಾರ ರೈತರಿಗೆ 9/11 ನೀಡುವಲ್ಲಿ ಸತಾಯಿಸುತ್ತಿದೆ.ಮೂರು ನಾಲ್ಕು ತಿಂಗಳಿಂದ ಗ್ರಾಮೀಣ ಭಾಗದ ಜನರು ಇದಕ್ಕಾಗಿ ದಿನನಿತ್ಯ ಅಲೆದಾಡುತ್ತಿದ್ದಾರೆ.ಪ್ರಾಧಿಕಾರದ ಅಧಿಕಾರಿಗಳು ಕಾರು ಬಾಡಿಗೆ ಸೇರಿ ಐದರಿಂದ ಹತ್ತು ಸಾವಿರ ಲಂಚ ಪಡೆಯುತ್ತಾರೆ.ಈ ಸಮಸ್ಯೆಯಿಂದ ನಿಗಧಿಯಾದ ಮದುವೆಗಳು ಮೂಂದೂಡಲ್ಪಟ್ಟಿದೆ.ಮಳೆಗಾಲ ಬಂದರು ಮನೆಗಳನ್ನು ನಿರ್ಮಿಸಲಾಗುತ್ತಿಲ್ಲ.ರೈತರಿಗೆ ದಾಖಲೆ ಸಿಗದೆ ಸಾಲ ದೊರೆಯುತ್ತಿಲ್ಲ.ಈ ಸಮಸ್ಯೆ ಶೀಘ್ರವಾಗಿ ಬಗೆಹರಿಯದಿದ್ದರೆ ಪ್ರಾಧಿಕಾರಕ್ಕೆ ಬೈಂದೂರು ರೈತ ಸಂಘ ಮುತ್ತಿಗೆ ಹಾಕಿ ಬೀಗ ಜಡಿಯಲಿದ್ದೇವೆ ಎಂದರು.
ಸಹಕಾರಿ ಸಂಘದಲ್ಲಿ ಬೆಳೆಸಾಲ ಈ ಹಿಂದೆ ನೋಟರಿ,ಅಫಿದಾವಿತ್ ಪಡೆದು ಸಾಲ ನೀಡಲಾಗುತ್ತಿತ್ತು.ಆದರೆ ಈಗ ನೊಂದಣಿ ಕಛೇರಿಯಲ್ಲಿ ಅಡಮಾನ ನೊಂದಣಿ ಮಾಡಬೇಕಿದೆ.ಇದರಿಂದ ಗ್ರಾಮೀಣ ಭಾಗದ ರೈತರಿಗೆ ಸಾವಿರಾರು ರೂಪಾಯಿ ಹೆಚ್ಚುವರಿ ಖರ್ಚಾಗುತ್ತದೆ.ಹೀಗಾಗಿ ಬೆಳೆಸಾಲವನ್ನು ಇದರಿಂದ ಹೊರತುಪಡಿಸಬೇಕು ಎಂದರು.
ವರದಿ/ಗಿರಿ ಶಿರೂರು