ಬೈಂದೂರು: ಕಂಬದಕೋಣೆ ಗ್ರಾಮ ಪಂಚಾಯತ್‌ನಲ್ಲಿ ಪ್ರಜಾಪ್ರಭುತ್ವದ ಕಗೊಲೆಯಾಗುತ್ತಿದ್ದು, ಬಡವರ ಹಿತ ಕಾಯಬೇಕಾದವರೇ ಲೂಟಿಕೋರರಾಗಿ ಮಾರ್ಪಟ್ಟಿದ್ದಾರೆ.ಸಂಘಟನೆಯು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳು ಪಂಚಾಯತ್ ಆಡಳಿತದ ಭ್ರಷ್ಟ ಮುಖವನ್ನು ಬಯಲು ಮಾಡಿದೆ ಎಂದು ಕಂಬದಕೋಣೆ ಸಮಾಜಕೀಯ ಸೇವೆ ಪ್ರಮುಖರಾದ ವೇದನಾಥ ಹೇರಂಜಾಲು ಹೇಳಿದರು ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಗ್ರಾಮೀಣ ಬಡವರಿಗೆ ಸಂಜೀವಿನಿಯಾಗಬೇಕಾದ ನರೇಗಾ ಯೋಜನೆಯಲ್ಲಿ ಸ್ವತಃ ಪಂಚಾಯತ್ ಅಧ್ಯಕ್ಷರೇ ಬಡವರ ಹೆಸರಿನಲ್ಲಿ ಕೂಲಿ ಹಣ’ವನ್ನು ಕಾನೂನು ಬಾಹಿರವಾಗಿ ಪಡೆಯುತಿದ್ದಾರೆ. ಬಡವರ ಹೊಟ್ಟೆಗೆ ಹೊಡೆದು ಅಧ್ಯಕ್ಷರ ಖಾತೆಗೆ ಹಣ ಸೇರುತ್ತಿರುವುದು ಅಕ್ಷಮ್ಯ ಅಪರಾಧವಾಗಿ ಎಂದರು.
ಅಕ್ರಮ ತುರ್ತು ಕಾಮಗಾರಿಗಳು: ತುರ್ತು ಕಾಮಗಾರಿ ಎಂಬ ಹಣೆಪಟ್ಟಿ ಹಚ್ಚಿ, ಟೆಂಡರ್ ಪ್ರಕ್ರಿಯೆಯನ್ನು ಗಾಳಿಗೆ ತೂರಿ ಜನರ ಹಕ್ಕಿನ ಹಣದ ಕಿಕ್ ಬ್ಯಾಕ್ ಪಡೆಯಲಾಗಿದೆ. ವೇ-ಬಿಲ್ ಮತ್ತು ಜಿಪಿಎಸ್ ರಹಿತ ಪಾವತಿ ಅನೇಕ ಕಾಮಗಾರಿಗಳಿಗೆ ಯಾವುದೇ ಅಧೀಕೃತ ವೇ-ಬಿಲ್ ಇಲ್ಲದೆ ಮತ್ತು ಕಡ್ಡಾಯವಾಗಿರಬೇಕಾದ ಜಿಪಿಎಸ್ ಫೋಟೋಗಳ ದಾಖಲೆಗಳಿಲ್ಲದೆ ಕೇವಲ ಕಾಗದದ ಮೇಲೆ ಬಿಲ್ ಸೃಷ್ಟಿಸಿ ಹಣವನ್ನು ಲೂಟಿ ಮಾಡಲಾಗಿದೆ. ಇದು ನೇರವಾಗಿ ಸಾರ್ವಜನಿಕ ಹಣದ ಸುಲಿಗೆಯಾಗಿದೆ. ಮಾರಕವಾಗಿರುವ ಅವೈಜ್ಞಾನಿಕ ಎತ್ತಿನಹೊಳೆ ಮಾದರಿಯ ಏತ ನೀರಾವರಿ ಯೋಜನೆಯ ವಿರುದ್ಧ ನಾವು ಸುದೀರ್ಘ ಹೋರಾಟ ಮಾಡಿದ್ದೇವೆ.ಆದರೆ, ನಮ್ಮ ಹಳ್ಳಿಯ ಈ ನೋವಿಗೆ ಸ್ಪಂದಿಸಲು ಒಬ್ಬನೇ ಒಬ್ಬ ರಾಜಕಾರಣಿಯಾಗಲಿ ಅಥವಾ ರಾಜಕೀಯ ಪಕ್ಷವಾಗಲಿ ಮುಂದೆ ಬರಲಿಲ್ಲ. ರಾಜಕೀಯ ಪಕ್ಷಗಳು ಕೇವಲ ವೋಟಿನ ಆಮಿಷಕ್ಕೆ ಸೀಮಿತವಾಗಿವೆ ಎಂದು ಮನವರಿಕೆಯಾದಾಗ, ನಮ್ಮ ಹಳ್ಳಿಯ ಹಕ್ಕನ್ನು ನಾವೇ ರಕ್ಷಿಸಿಕೊಳ್ಳಲು ಹುಟ್ಟಿಕೊಂಡಿದ್ದೆ. ಗ್ರಾಮ ಪಂಚಾಯತ್ ಎಂಬುದು ರಾಜಕೀಯ ಪಕ್ಷಗಳ ಅಡಿಯಾಳಲ್ಲ, ಅದು ಸಂವಿಧಾನಬದ್ಧವಾದ ಒಂದು (ಸ್ವತಂತ್ರ ಘಟಕ). ಕರ್ನಾಟಕ ಪಂಚಾಯತ್ ರಾಜ್ ಅಽನಿಯಮ 1993 ರ ಪ್ರಕಾರ ಪಂಚಾಯತ್ ಚುನಾವಣೆಗಳು ಪಕ್ಷಾತೀತವಾಗಿ ನಡೆಯಬೇಕು. ನಾವು ಪಂಚಾಯತ್ ಅನ್ನು ರಾಜಕೀಯ ಮುಕ್ತಗೊಳಿಸಿ, ಅದನ್ನು ಪವಿತ್ರ ಆಡಳಿತ ಕೇಂದ್ರವನ್ನಾಗಿ ಮಾಡಲು ಪಣತೊಟ್ಟಿದ್ದೇವೆ.
ನಮ್ಮ ಆಗ್ರಹಗಳೇನು: ಕೂಲಿ ಹಣ ಲೂಟಿ ಮಾಡಿದ ಅಧ್ಯಕ್ಷರನ್ನು ತಕ್ಷಣ ಅನರ್ಹಗೊಳಿಸಿ. ಕ್ರಿಮಿನಲ್ ಮೊಕದ್ದಮೆ ಹೂಡಬೇಕು.ಅಕ್ರಮ ತುರ್ತು ಕಾಮಗಾರಿಗಳ ಪಾವತಿಯ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು. ಅವೈಜ್ಞಾನಿಕ ನೀರಾವರಿ ಯೋಜನೆಯನ್ನು ಕೈಬಿಟ್ಟು ಜನಸ್ನೇಹಿ ಯೋಜನೆ ಜಾರಿಗೆ ಬರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನೀರಾವರಿ ಸಂತ್ರಸ್ಥ ರೈತರ ಒಕ್ಕೂಟದ ಅಧ್ಯಕ್ಷೆ ಜಯಂತಿ ಐತಾಳ್,ಸಮಾಜಕೀಯ ಸೇನೆಯ ಕೃಷ್ಣ ಪೂಜಾರಿ ಹಿತ್ಲುಮನೆ,ರಾಘವೇಂದ್ರ,ಮಣಿರಾಜ ಪೂಜಾರಿ ಹೇರಂಜಾಲು,ಶ್ರೀಕಾಂತ ಹಾಜರಿದ್ದರು.