ಬೈಂದೂರು: ಶಾಸಕ ಗುರುರಾಜ್ ಗಂಟಿಹೊಳೆ ಕ್ಷೇತ್ರದ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸಿ, ಇನ್ನಷ್ಟು ಯೋಜನೆಗಳ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವಿಶೇಷ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಿದ್ದು, ಪ್ರತೀ ಗ್ರಾಮಗಳಲ್ಲಿ ಉತ್ಸವದ ಮೂಲಕ ಗ್ರಾಮದ ಭೌತಿಕ ಬೆಳವಣಿಗೆ ಜತೆಗೆ ಸಂಜೀವಿನಿ ಸಂಘಗಳಿಗೆ ಸ್ವಾವಲಂಬನೆ ನೀಡಬೇಕು ಹಾಗೂ ಕ್ಷೇತ್ರದ ಪ್ರತಿಯೊಬ್ಬರೂ ಉತ್ಸವದ ಭಾಗವಾಗಬೇಕು ಎಂಬ ಉದ್ದೇಶದಿಂದ ಗ್ರಾಮೋತ್ಸವಗಳನ್ನು ಆಯೋಜಿಸಿದ್ದಾರೆ. ಈ ಅಭಿಯಾನ ದೇಶದಲ್ಲಿ ಪ್ರಥಮ ಎಂದು ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ ಹೇಳಿದರು.
ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಆರೋಗ್ಯ, ಕೃಷಿ, ಪಶು ಸಂಗೋಪನಾ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಹಾಗೂ ಬ್ಯಾಂಕಿAಗ್ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಕಿರಿಮಂಜೇಶ್ವರ ಗ್ರಾಮೋತ್ಸವ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಸಾಧಕರು ಮತ್ತು ಆರು ವಿಕಲಚೇತನರನ್ನು ಸನ್ಮಾನಿಸಲಾಯಿತು. ಪುರುಷ ಹಾಗೂ ಮಹಿಳೆಯರಿಗಾಗಿ ನಡೆದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೋಡೆಲ್ ಅಧಿಕಾರಿ ರಮೇಶ ಕುಲಾಲ್, ಬೈಂದೂರು ಉತ್ಸವ ಸಂಚಾಲಕ ಶ್ರೀಗಣೇಶ ಗಾಣಿಗ, ಉಪಾಧ್ಯಕ್ಷೆ ಅನಿತಾ ಆರ್. ಕೆ., ತಾಪಂ ಮಾಜಿ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಶ್ಯಾಮಲಾ ಕುಂದರ್, ತಾಲೂಕು ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಲಯನ್ಸ್ ಕ್ಲಬ್ ಅಧ್ಯಕ್ಷ ನಿತ್ಯಾನಂದ ಆಚಾರ್ಯ ಹಾಗೂ ಗ್ರಾಪಂ ಸದಸ್ಯರು ಇದ್ದರು. ಪಿಡಿಒ ರಾಜೇಶ್ ಸ್ವಾಗತಿಸಿ, ಗ್ರಾಪಂ ಸದಸ್ಯ ಈಶ್ವರ ದೇವಾಡಿಗ ವಂದಿಸಿದರು. ದೀಪಕ್ ನಿರೂಪಿಸಿದರು.
ಸಾರ್ವಜನಿಕರಿಗೆ ಎ.ಜೆ. ಆಸ್ಪತ್ರೆಯ, ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ, ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು. ತೋಟಗಾರಿಕೆ ಬಗ್ಗೆ ಮಾಹಿತಿ ಮತ್ತು ಕೆಲವು ಆಯ್ದ ಫಲಾನುಭವಿಗಳಿಗೆ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಕೃಷಿ ಸಲಕರಣೆಗಳ ಪ್ರದರ್ಶನ, ಅರಣ್ಯ ಇಲಾಖೆಯಿಂದ ಸಸ್ಯಗಳ ಪೋಷಣೆ ಮತ್ತು ಸಂರಕ್ಷಣೆ ಕುರಿತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳೆಯರ ಸಬಲೀಕರಣದ ಬಗ್ಗೆ ಹಾಗೂ ಮೆಸ್ಕಾಂನಿಂದ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಯಿತು.