ಬೈಂದೂರು,ಡಿ.30: ಪಟ್ಟಣ ಪ್ರದೇಶದ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ನೂರು ದಿನ ಪೂರೈಸಿದೆ.
ಮಂಗಳವಾರ ಪ್ರತಿಭಟನೆಯ ನೇತ್ರತ್ವ ವಹಿಸಿ ಮಾತನಾಡಿದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಈಗಾಗಲೇ ನಾಲ್ಕು ತಿಂಗಳಿಂದ ಸಾವಿರಾರು ರೈತರು ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.ಅಧಿವೇಶನದಲ್ಲೂ ಕೂಡ ಜನನಾಯಕರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.ಪಕ್ಷಾತೀತವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ರಾಜಕೀಯ ಮುಖಂಡರು ,ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದಾರೆ.ಈಗಾಗಲೇ ಎಲ್ಲಾ ವಿವರಗಳ ಪ್ರಸ್ತಾವನೆ ಸರಕಾರದ ಮುಂದಿದ್ದು ಅಧಿಕಾರಿಗಳ ಅನಗತ್ಯ ವಿಳಂಬದಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ.ರೈತರ ಬೇಡಿಕೆಯ ಬಗ್ಗೆ ನಿರ್ಲಕ್ಷ ಸಲ್ಲದು.ಮುಂದಾಗುವ ಎಲ್ಲಾ ಸಮಸ್ಯೆಗಳಿಗೂ ಅಧಿಕಾರಿಗಳೆ ಕಾರಣ ಎಂದರು.
ಜನವರಿ 2 ರಂದು ಬ್ರಹತ್ ಪ್ರತಿಭಟನೆ: ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿರುವ ಜೊತೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲಾಗಿತ್ತು.ಬೆಳಗಾವಿ ಅಧಿವೇಶನ ಸೇರಿದಂತೆ ಬೆಂಗಳೂರಿನಲ್ಲೂ ಕೂಡ ವಿವಿಧ ಸಚಿವರು, ಅಧಿಕಾರಿಗಳನ್ನು ಬೇಟಿ ಮಾಡಿ ವಾಸ್ತವತೆ ತಿಳಿಸಲಾಗಿತ್ತು.ಸರಕಾರದ ಮಟ್ಟದಲ್ಲಿ ಅನಗತ್ಯ ವಿಳಂಬವಾಗಿರುವುದು ಸ್ಪಷ್ಟವಾಗಿದೆ.ಹೀಗಾಗಿ ಜನವರಿ 2 ರಂದು ಬೈಂದೂರು ರೈತರ ಸಂಘದ ವತಿಯಿಂದ ಬೈಂದೂರಿನಲ್ಲಿ ಬ್ರಹತ್ ಪ್ರತಿಭಟನೆ ಜಾಥಾ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಅರುಣ್ ಕುಮಾರ್‌ಶಿರೂರು,ಸಮಾಜ ಸೇವಕ ಸುಬ್ರಹ್ಮಣ್ಯ ಬಿಜೂರು,ಮಹಾದೇವ ಪೂಜಾರಿ ಕಿಸ್ಮತ್ತಿ,ಕೇಶವ ಪೂಜಾರಿ ಅಂತಾರ್,ಮಹಾದೇವ ಗೊಂಡ ಕಡ್ಕೆ,ಚಂದು ಮರಾಠಿ,ಮಂಜು ಗೊಂಡ,ನಾಗರಾಜ ಪೂಜಾರಿ ವಸ್ರೆ,ರಾಜು ಪೂಜಾರಿ ವಸ್ರೆ ಹಾಜರಿದ್ದರು..
ವರದಿ/ ಗಿರಿ ಶಿರೂರು