ಬೈಂದೂರು: ಮಾನವ ಧರ್ಮದ ನಿರ್ಮಾಣ ಭಜನೆಯಿಂದ ಮಾತ್ರ ಸಾಧ್ಯ.ಒಳ್ಳೆಯ ವ್ಯಕ್ತಿತ್ವ,ಕುಟುಂಬ,ಸಮಾಜ ನಿರ್ಮಾಣದ ಮೂಲಕ ಉತ್ತಮ ದೇಶ ನಿರ್ಮಾಣ ಸಾಧ್ಯ.ಸರಳ ಸಾಹಿತ್ಯದ ಮೂಲಕ ದೇವರನ್ನು ಒಲಿಸಲು ಭಜನೆ ಉಪಯುಕ್ತ.ಭಗವಂತನನ್ನು ತಲುಪುವ ಸುಲಭ ಮಾರ್ಗ ಅದು ಭಜನೆ.ಭಜನೆ ಎಂಬ ಮೂರಕ್ಷರಕ್ಕೆ ಬಹಳ ಮಹತ್ವವಿದೆ.ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎಂಬ ಮಾತಿದೆ.ಸಮಾಜವನ್ನು ಒಗ್ಗೂಡಿಸಲು ಆದ್ಯಾತ್ಮಿಕ ಜಾಗೃತಿಗೆ ಭಜನೆ ಸಹಕಾರಿ.ಇಂದಿನ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದು ಭಜನೆಯ ಮಹತ್ವದ ಬಗ್ಗೆ ಪಾಲಕರು ಅರಿವು ಮೂಡಿಸಬೇಕಾದ ಜವಬ್ದಾರಿ ಪಾಲಕರದ್ದಾಗಿದೆ.ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಕರೆತಂದು ಭಜನೆಯ ಬಗ್ಗೆ ಅವರಿಗೆ ಉತ್ತೇಜಿಸಬೇಕು ಎಂದು ಧ.ಮ.ಭಜನಾ ಭರಿಷತ್ ಬೈಂದೂರು ತಾಲೂಕು ಗೌರವಾಧ್ಯಕ್ಷ ರಘುರಾಮ ಕೆ.ಪೂಜಾರಿ ಹೇಳಿದರು ಅವರು ಬೈಂದೂರು ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆಯಲ್ಲಿ ನಡೆದ ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಬೈಂದೂರು ತಾಲೂಕು ಇದರ ವತಿಯಿಂದ ಹಿರಿಯ ಭಜನಾ ಹಾಡುಗಾರರಿಗೆ ಗೌರವ ಸಮರ್ಪಣೆ ಹಾಗೂ ಬೈಂದೂರು ವಲಯದ ಭಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಮೂರ್ತಿ ನಾವುಡ,ರಾಜ್ಯ ಭಜನಾ ಪರಿಷತ್ ಉಪಾಧ್ಯಕ್ಷ ರಾಜೇಂದ್ರ ಕುಮಾರ್,ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ,ಯೋಜನಾಧಿಕಾರಿ ಸಂಜಯ ನಾಯ್ಕ,ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ರಾಮ ಮೇಸ್ತ,ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಭಜನಾ ಹಾಡುಗಾರರನ್ನು ಸಮ್ಮಾನಿಸಲಾಯಿತು.
ಬೈಂದೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಮಂಜುನಾಥ ಉಳ್ಳೂರು ವಾರ್ಷಿಕ ವರದಿ ವಾಚಿಸಿದರು.ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುರೇಖಾ ಪೂಜಾರಿ ಸ್ವಾಗತಿಸಿದರು.ತಾಲೂಕು ಕೃಷಿ ಅಧಿಕಾರಿ ರಾಜು ಜೋಗಿ ಕಾರ್ಯಕ್ರಮ ನಿರೂಪಿಸಿದರು.ವಲಯ ಮೇಲ್ವಿಚಾರಕ ಕೃಷ್ಣ ಮರಾಠಿ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು