ಬೈಂದೂರು: ಕಳೆದ ಐದು ವರ್ಷಗಳಿಂದ ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದೀಪಕ್ ಕುಮಾರ್ ಶೆಟ್ಟಿ ಶುಕ್ರವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಘಟನಾ ಪರ್ವದ ಆಶಯದಂತೆ ನನ್ನ ಸ್ವಂತ ಇಚ್ಚೆಯಿಂದ ರಾಜೀನಾಮೆ ನೀಡುತ್ತಿದ್ದು ಮುಂದಿನ ಹೊಸ ನಾಯಕತ್ವಕ್ಕೆ ಬೆಂಬಲ ನೀಡುತ್ತಿರುವುದಾಗಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಬೈಂದೂರು ಮಂಡಲ ಬಿಜೆಪಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ನೂತನ ಪದಾಕಾರಿಗಳ ಪಟ್ಟಿ ಈಗಾಗಲೇ ಸಿದ್ಧವಾಗಿದ್ದು, ಇಂದು ಸಂಜೆಯೊಳಗೆ ಅಧ್ಯಕ್ಷರ ಘೋಷಣೆಯಾಗಲಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿ ಕುತ್ಯಾರು ನವೀನ್ ಶೆಟ್ಟಿಯವರನ್ನು ನೇಮಕ ಮಾಡಿದ ಬಳಿಕಾ ಜಿಲ್ಲಾ ಬಿಜೆಪಿಯೊಳಗೆ ಬದಲಾವಣೆ ಪರ್ವ ಆರಂಭವಾಗಿದೆ. ಈ ನಿಟ್ಟಿನಲ್ಲಿ ದೀಪಕ್ ಕುಮಾರ್ ಶೆಟ್ಟಿ ರಾಜೀನಾಮೆ ಮಹತ್ವ ಪಡೆದುಕೊಂಡಿತ್ತು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಜಿಲ್ಲಾಧ್ಯಕ್ಷರು ಶನಿವಾರ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಬೈಂದೂರು ರೈತ ಸಂಘದ ಮೂಲಕ ಸೈದ್ಧಾಂತಿಕ ಹೋರಾಟ ಮಾಡುತ್ತಾ, ಮಾಜೀ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ ಬೈಂದೂರು ಮಂಡಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ದೀಪಕ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದರು. ತಮ್ಮ ಅವಧಿಯಲ್ಲಿ ಹಲವು ಚುನಾವಣೆಗಳನ್ನು ಎದುರಿಸಿ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದರು. ರಾಜಕೀಯ ಚಕ್ರವ್ಯೂಹದ ಪಡಸಾಲೆ ಎಂದೇ ಪ್ರಸಿದ್ಧವಾಗಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಸಂಘಟಿತ ಹೋರಾಟ ಕಾಂಗ್ರೆಸ್ಸನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಬೈಂದೂರು ಬಿಜೆಪಿಗೆ ಸರ್ಜರಿ ಮಾಡಿರುವುದು ಮುಂದಿನ ರಾಜಕೀಯ ಬದಲಾವಣೆಯ ದಿಕ್ಕೂಚಿಯಾಗಲಿದೆಯೇ ಕಾದು ನೋಡಬೇಕಿದೆ.