ಬೈಂದೂರು; ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಕುಂದ ಅಧ್ಯಯನ ಕೇಂದ್ರ ಹಾಗೂ ಕುಂದಾಪ್ರ ಡಾಟ್ ಕಾಂ ನೇತೃತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಅಗಸ್ಟ್ 4ರ ಭಾನುವಾರ ಸಂಜೆ 4:30ಕ್ಕೆ ಉಪ್ಪುಂದದ ಶಂಕರ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಹೇಳಿದರು.ಅವರು ಶನಿವಾರ ಬೈಂದೂರು ಪ್ರೆಸ್ ಕ್ಲಬ್‌ನಲ್ಲಿ ಜರುಗಿದ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಪ್ರತಿವರ್ಷ ವಿವಿಧೆಡೆ ಆಚರಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಉಪ್ಪುಂದದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನಮ್ಮ ಬದುಕಿನ ಭಾಗವಾಗಿರುವ ಕುಂದಾಪ್ರ ಕನ್ನಡ ಭಾಷೆಯ ಮೇಲಿನ ಅಭಿಮಾನ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಭಾಷೆ, ಬದುಕು, ಸಂಸ್ಕೃತಿಯನ್ನು ಸಂಭ್ರಮಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕುಂದಾಪ್ರ ಕನ್ನಡಿಗರಿಗಾಗಿ 2 ಸ್ಪರ್ಧೆಗಳನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಪುರುಷ ಹಾಗೂ ಮಹಿಳೆಯರಿಗೆ ಸಾಂಪ್ರದಾಯಿಕ ಹಾಡುಗಳ ಗಾಯನ ಸ್ಪರ್ಧೆ ಕುಂದ ಕಂಠ ಗಾಯನ ಹಾಗೂ ಮಹಿಳೆಯರಿಗೆ ಕೊಟ್ಟಿ ಸೆಟ್ಟುವ ಸ್ವರ್ಧೆ ಆಯೋಜಿಸಲಾಗಿದ್ದು ಎರಡೂ ಸ್ಪರ್ಧೆಗಳಿಗೂ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕುಂದನಾಡಿನ ಪ್ರಾಚೀನ ವಸ್ತುಗಳ ಪಡ್ಸಾಲೆ ಪ್ರದರ್ಶನ ಹಾಗೂ ಕುಂದಾಪುರದ ಖ್ಯಾತ ಹಾಸ್ಯ ಕಲಾವಿದ ಮಂಜುನಾಥ ಕುಂದೇಶ್ವರ ಅವರಿಂದ ವಿಶೇಷ ಹಾಸ್ಯ ಕಾರ್ಯಕ್ರಮ ನ್ಯೆಗಿ ಕಡ್ಲ್ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸುಬ್ರಹ್ಮಣ್ಯ ಹೆಬ್ಬಾಗಿಲು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗದ ಪ್ರತಿನಿಧಿ ಅರುಣ್ ಕುಮಾರ್ ಶಿರೂರು, ಕುಂದ ಅಧ್ಯಯನ ಕೇಂದ್ರದ ಸಂಚಾಲಕ ಗಣಪತಿ ಹೋಬಳಿದಾರ್, ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಉಪಸ್ಥಿತರಿದ್ದರು.