ಬೈಂದೂರು: ಕ್ಷೇತ್ರದ ಜನಪ್ರಿಯ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸರ್ಕಾರಿ ಶಾಲೆಗಳ ಸೌಲಭ್ಯ ಸುಧಾರಣೆಗೆ ಈಗಾಗಲೇ ಸಮೃದ್ಧ ಬೈಂದೂರು ಪರಿಕಲ್ಪನೆಯಡಿ 300 ಟ್ರೀಸ್ ಕಾರ್ಯಕ್ರಮದ ಮೂಲಕ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳ ದಾನಿಗಳು, ಸಂಸ್ಥೆಗಳಿಂದ ಕೊಡುಗೆ ಆಹ್ವಾನಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಸಾಗರದಾಚೆಗೂ ಸಹಾಯಹಸ್ತ ಕೋರುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.ಇತ್ತೀಚೆಗೆ ದುಬೈ ಪ್ರವಾಸದ ಸಂದರ್ಭದಲ್ಲಿ ಶಾಸಕರಾಗ ಗುರುರಾಜ್ ಗಂಟಿಹೊಳೆ ಅವರು ಅಲ್ಲಿ ನೆಲೆಸಿರುವ ಕ್ಷೇತ್ರದ, ಜಿಲ್ಲೆಯ ಬಂಧುಗಳೊಂದಿಗೆ ಮಾತುಕತೆ ನಡೆಸಿ ಬೈಂದೂರಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ರೂಪುರೇಷೆಗಳನ್ನು ತೆರೆದಿಟ್ಟಿದ್ದಾರೆ.

ನಮ್ಮ ಕುಂದಾಪ್ರ ಕನ್ನಡ ಬಳಗದ ಸಾಧನ್ ದಾಸ್ ಕಾರ್ಯಕ್ರಮ ಆಯೋಜಿಸಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅವರು ಊರಿನ ಅಭಿವೃದ್ದಿಗೋಸ್ಕರ ನಮ್ಮ ಕುಂದಾಪ್ರ ಕನ್ನಡ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಹಮ್ಮಿಕೊಂಡು ಬಂದಿದೆ ಈ ವರ್ಷವೂ ಕೂಡ ಕನ್ನಡ ಶಾಲೆಗಳನ್ನು‌ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಶಾಸಕರ ಮುಂದಾಳತ್ವದಲ್ಲಿ ಈ ಕಾರ್ಯವನ್ನು ಆಯೋಜಿಸಿದ್ದು ಗಲ್ಫ್ ರಾಷ್ಟ್ರದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿರುವುದು ಬಹಳ ಸಂತೋಷವಾಗಿದೆ ಮತ್ತು ನಿರಂತರವಾಗಿ ಶಿಕ್ಷಣ ಮತ್ತು ಸಾಮಾಜಿಕ ‌ಅಭಿವೃದ್ದಿಗೆ ನಮ್ಮ ಕುಂದಾಪ್ರ ಕನ್ನಡ ತೊಡಗಿಸಿಕೊಂಡಿದೆ ಎಂದರು.

ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮಾತನಾಡಿ ಬೈಂದೂರು ಕ್ಷೇತ್ರದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಯವರ ಸಮೃದ್ದ ಬೈಂದೂರು ಯೋಜನೆ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ ಅನಿವಾಸಿ ಭಾರತೀಯರ ಸಹಕಾರದ ಮೂಲಕ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವಂತ ಕೆಲಸ ಅತ್ಯುತ್ತಮವಾಗಿದೆ.ಗಲ್ಫ್ ರಾಷ್ಟ್ರದಲ್ಲಿ ಇದಕ್ಕೆ ನಿರಂತರ ಸಹಕಾರ ನೀಡಲಿದ್ದೇವೆ ಎಂದರು.

ಉದ್ಯಮಿ ಮಣೆಗಾರ್ ಮೀರಾನ್ ಸಾಹೇಬ್ ಮಾತನಾಡಿ ಶಿಕ್ಷಣ ಮತ್ತು ಆರೋಗ್ಯ ದ ಅಭಿವೃದ್ದಿಯಾದರೆ ಊರಿನ ಅಭಿವೃದ್ದಿಯಾದಂತೆ ಈ ನೆಲೆಯಲ್ಲಿ ಸಾರ್ವಜನಿಕರ ಸಹಕಾರದ ಮೂಲಕ ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ ಕಾರ್ಯಕ್ರಮ ಕೈಗೊಂಡರೆ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದರು.

ಅತ್ಯುತ್ತಮ ಸ್ಪಂದನೆ; ಬೈಂದೂರು ಕ್ಷೇತ್ರದ ಸರ್ಕಾರಿ ಶಾಲೆ ಅಭಿವೃದ್ಧಿಗೆ ಶಾಸಕರು ಹೊಂದಿರುವ ಬದ್ಧತೆ ಹಾಗೂ ಕಾರ್ಯ ನಿಷ್ಠೆಗೆ ದುಬೈ ನಲ್ಲಿ ನೆಲೆಸಿರುವ ಕ್ಷೇತ್ರದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿ ಒಂದೇ ಮಾತುಕತೆಯಲ್ಲಿ 7 ಶಾಲೆಗಳನ್ನು ದತ್ತು ಪಡೆಯಲು ಏಳು ಮಂದಿ ದಾನಿಗಳು‌ ಮುಂದೆ ಬಂದಿದ್ದಾರೆ. ಅನೇಕರು ಹಲವು ರೀತಿಯಲ್ಲಿ ಸರ್ಕಾರಿ ಶಾಲೆಗೆ ಕೊಡುಗೆ ನೀಡುವುದಾಗಿ ಮತ್ತು ಅಭಿವೃದ್ಧಿಗೆ ಸಹಕರಿಸುವುದಾಗಿ ಬೆಂಬಲ ಸೂಚಿಸಿದ್ದಾರೆ.ಇದೇ ವೇಳೆ ದುಬೈ ಉದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು ಜತೆಯಾಗಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರನ್ನು ಸನ್ಮಾನಿಸಿದರು.ಭೇಟಿಯ ವೇಳೆ ವಕ್ವಾಡಿ ಪ್ರವೀಣ್ ಶೆಟ್ಟಿ ಮತ್ತು ಗ್ರೀನ್ ವ್ಯಾಲಿ ಸಂಸ್ಥಾಪಕರಾದ ಮೀರನ್, ರಮೀ ಗ್ರೂಪ್ ಮಾಲಕರಾದ ವರದರಾಜ್ ಶೆಟ್ಟಿ, ಪ್ರಮುಖರಾದ ಗೋಪಾಲ್ ಶೆಟ್ಟಿ, ವೆಂಕಟೇಶ್ ಕಿಣಿ, ಸುರೇಶ್ ಶೆಟ್ಟಿ, ಕೃಷ್ಣ ಪ್ರಸಾದ್ ಅಡ್ಯಂತಾಯ, ಅರುಣ್ ಕುಮಾರ್ ಶಿರೂರು ಮೊದಲಾದವರು ಉಪಸ್ಥಿತರಿದ್ದರು.

ಇದೊಂದು ಸ್ಮರಣೀಯ ಪ್ರವಾಸ; ಪ್ರವಾಸವೆಂದರೆ ಮೋಜು ಮಸ್ತಿ‌ ಮಾತ್ರವಲ್ಲ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಚಿಂತನೆಯನ್ನು ತೆರೆದಿಡಬಹುದು ಎನ್ನುವುದಕ್ಕೆ ದುಬೈ ಪ್ರವಾಸ ಸಾಕ್ಷಿಯಾಗಿದೆ. ಬೈಂದೂರು ‌ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿಮಾನ ನಿಲ್ದಾಣ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ದುಬೈನಲ್ಲಿ ನೆಲೆಸಿರುವ ನಮ್ಮ ಕ್ಷೇತ್ರದ ಸಾಧಕರು ಹಾಗೂ ಉದ್ಯಮಗಳನ್ನು ಕೋರಿಕೊಂಡಾಗ ಎಲ್ಲವೂ ಉತ್ತಮವಾಗಿ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ವಲಯದಿಂದಲೂ ಉತ್ತಮ ಸಹಕಾರ ವ್ಯಕ್ತವಾಗುತ್ತಿದೆ. ಈ ಪ್ರವಾಸವು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸ್ಮರಣೀಯ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಶಿರೂರು ಅಸೋಶಿಯೇಷನ್‌ ದುಬೈ, ಕುಂದಾಪುರ ದೇವಾಡಿಗ ಮಿತ್ರ ದುಬೈ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ದುಬೈಗೆ ಭೇಟಿ ನೀಡಿದ್ದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸಮೃದ್ಧ ಬೈಂದೂರು ಕನಸಿಗೆ ಪೂರಕವಾಗಿರುವ ಸಮೃದ್ಧ ಗ್ರಾಮ ಮತ್ತು 300 ಟ್ರೀಸ್ ಯೋಜನೆಗಳ ಕುರಿತು ಬೈಂದೂರು ಭಾಗದ ದುಬೈ ಉದ್ಯಮಿಗಳಿಗೆ ಮಾಹಿತಿ ನೀಡಿ, ಕಾರ್ಯಕ್ರಮಗಳಿಗೆ ಸಹಕಾರ ಕೋರಿದರು.

ಶಿರೂರು ಮಾದರಿ ಗ್ರಾಮ; ಸರ್ಕಾರಿ ಶಾಲೆಯ ಅಭಿವೃದ್ಧಿಯ ಜತೆಗೆ ಶಿರೂರು ಉದ್ಯಮಿಗಳು 300 ಟ್ರೀಸ್ ಪರಿಕಲ್ಪನೆಯಡಿ ಶಿರೂರಿನ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ದತ್ತು ಪಡೆಯುವುದಾಗಿ ಘೋಷಿಸಿದ್ದಾರೆ. ಇದರ ಜತೆಗೆ ಶಿರೂರು ಅಸೋಸಿಯೇಷನ್ ದುಬೈ ವತಿಯಿಂದ ಶಿರೂರು ಮಾದರಿ ಗ್ರಾಮವಾಗಿ ರೂಪಿಸುವ ಸಂಕಲ್ಪ ಮಾಡಿದರು. ಬೈಂದೂರು ವಿದ್ಯಾರ್ಥಿಗಳ ವಿದ್ಯಾನಿಧಿಗೆ ಸಹಕರಿಸುತ್ತೇವೆ ಎಂದು ಉದ್ಯಮಿಗಳು ತಿಳಿಸಿದ್ದಾರೆ.

Leave a Reply

Your email address will not be published.

fifteen + thirteen =