ಬೈಂದೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಕಬಳಿಕೆ ವ್ಯವಹಾರ ಬೈಂದೂರಿನಲ್ಲಿ ನಿರಂತರ ಮುಂದುವರಿದಿದೆ.ಕಳೆದ ವರ್ಷ ಇಂತಹ ಭೂಕಬಳಿಕೆ ಕುರಿತು ವರದಿ ಪ್ರಕಟಿಸಿತ್ತು.ಮಾತ್ರವಲ್ಲದೆ ಸಚಿವರು,ಸಂಸದರು ಕೂಡ ಇಂತಹ ಪ್ರಕರಣಗಳ ಕುರಿತು ಗಂಭೀರವಾಗಿ ಪರಿಗಣಿಸಲು ಜಿಲ್ಲಾಡಳಿತಕ್ಕೆ ತಿಳಿಸಿದ್ದರು.ಆದರೆ ಬೈಂದೂರು ತಾಲೂಕು ವ್ಯಾಪ್ತಿಯ ನಕಲಿ ದಾಖಲೆ ಮತ್ತು ಅನಧೀಕೃತ ಭೂಕಬಳಿಕೆ ನಿರಂತರವಾಗಿ ಮುಂದುವರಿದಿದೆ.
ನೊಂದಾವಣಿ ಇಲಾಖೆ ನೋಟಿಸ್: ಬೈಂದೂರು ವ್ಯಾಪ್ತಿಯಲ್ಲಿ ಭೂಕಬಳಿಕೆ ಹಿಂದೆ ಕೆಲವು ಅಧಿಕಾರಿಗಳೆ ಶಾಮೀಲಾಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.ಇತ್ತೀಚೆಗೆ ವಿದೇಶದಲ್ಲಿರುವವರು ಹಾಗೂ ಪರ ಊರಿನಲ್ಲಿರುವ ಹೆಸರಿನಲ್ಲಿ ನಕಲಿ ಜಿ.ಪಿ.ಎ ಮಾಡಿ ನೊಂದಾವಣಿ ಮೂಲಕ ಪಹಣಿ ಬದಲಾವಣೆ ನಡೆಯುತ್ತಿದೆ.ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಬೈಂದೂರು ತಾಲೂಕು ಆಡಳಿತ ಸೌಧ ನೊಂದಾವಣಿಗೆ ಕೆಲವು ಭೂ ದಾಖಲೆ ಬದಲಾವಣೆ ಮಾಡುತ್ತಿದ್ದು ಈ ಕುರಿತು ಸಾರ್ವಜನಿಕರು ಜಾಗೃತರಾಗಬೇಕೆಂದು ನೋಟಿಸ್ ಅಂಟಿಸಲಾಗಿದೆ.ಇದರ ಜೊತೆಗೆ ಶಿರೂರು ವ್ಯಾಪ್ತಿಯಲ್ಲಿ ಸ.ನಂ 153/2, 153/22, 153/23 ರಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ಬೈಂದೂರು ಆರಕ್ಷಕ ಠಾಣೆಯಲ್ಲಿ ಮತ್ತು ಬೈಂದೂರು ತಹಶೀಲ್ದಾರರಿಗೆ ದೂರು ನೀಡಲಾಗಿದೆ.
ಸರಕಾರಿ ಅಧಿಕಾರಿಗಳು ಶಾಮೀಲು: ಬೈಂದೂರಿನ ಕೆಲವು ಕಡೆ ಅನಧೀಕೃತ ಭೂಕಬಳಿಕೆ ವ್ಯವಹಾರದಲ್ಲಿ ಸರಕಾರಿ ನೌಕರರು ಕೂಡ ಭಾಗಿಯಾಗಿರುವುದು ಬಹಿರಂಗಗೊಂಡಿದೆ.ಶಿರೂರು ಹಾಗೂ ಬೈಂದೂರು ಭಾಗದಲ್ಲಿ ಸುಮಾರು ಒಂದು ಎಕರೆಗೂ ಅಧಿಕ ಭೂಮಿಗಳು ಸರಕಾರಿ ನೌಕರರ ಹೆಸರಲ್ಲಿ ನೊಂದಣಿಯಾಗಿದೆ.ಸರಕಾರಿ ನೌಕರರು ಭೂಮಿಯ ವಿಕ್ರಮ ಮಾಡಬೇಕಾದಾಗ ಜಿಲ್ಲಾಡಳಿತದ ಅನುಮತಿ ಮತ್ತು ಸೂಕ್ತ ದಾಖಲೆ ನೀಡಬೇಕು.ಆದರೆ ಇವುಗಳಲ್ಲಿ ಸರಕಾರದ ಯಾವ ನಿಯಮಗಳು ಪಾಲನೆಯಾಗಿಲ್ಲ.ಹೀಗಾಗಿ ಲೋಕಾಯುಕ್ತ ಇಲಾಖೆ,ಜಿಲ್ಲಾಡಳಿತ ಬಡವರ ಭೂಮಿ ಉಳಿಸಿಕೊಳ್ಳಲು ಸಹಕರಿಸಬೇಕು ಎನ್ನುವುದು ಸಂತ್ರಸ್ಥರಾದ ನಾರಾಯಣ ಪೂಜಾರಿ ಶಿರೂರು ಇವರ ಅಭಿಪ್ರಾಯವಾಗಿದೆ.ಒಟ್ಟಾರೆಯಾಗಿ ನೊಂದಾವಣಿ ಇಲಾಖೆ,ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸೂಕ್ತ ಪರಿಶೀಲನೆ ನಡೆಸಬೇಕು ಮತ್ತು ನಕಲಿ ದಾಖಲೆ ಸೃಷ್ಟಿಸಿ ನಡೆಯುವ ಪಹಣಿ ದಾಖಲೆ ಬದಲಾವಣೆಗೆ ತಡೆ ಹಿಡಿಯಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಇಂದಿರಾ ಕ್ಯಾಂಟಿನ್ ಹೆಸರಿನಲ್ಲಿ ತಾಲೂಕು ಆಡಳಿತ ಜಾಗಕ್ಕೆ ಕನ್ನ: ಬೈಂದೂರು ಗ್ರಾಮಾಂತರದ ಭಾಗಗಳಲ್ಲಿ ಭೂಕಬಳಿಕೆ ಒಂದೆಡೆಯಾದರೆ ಬೈಂದೂರಿನ ಹೃದಯ ಭಾಗದಲ್ಲಿರುವ ತಾಲೂಕು ಆಡಳಿತ ಸೌಧದ ಜಾಗವೂ ಕೂಡ ಒತ್ತುವರಿಯಾಗಿದೆ.ಹಲವು ವರ್ಷದಿಂದ ಬೇಡಿಕೆಯಿದ್ದರು ಕೂಡ ತಾಲೂಕು ಕಛೇರಿ ಜಾಗದ ವ್ಯಾಪ್ತಿಗೆ ಆವರಣ ಗೋಡೆ ಕೂಡ ಇನ್ನು ನಿರ್ಮಾಣವಾಗಿಲ್ಲ.ಹೀಗಾಗಿ ಸರ್ವೆ ನಂ.165/1, 334/3 ರಲ್ಲಿ ಒಟ್ಟು ಎರಡು ಎಕರೆಗೂ ಅಧಿಕ ಸರಕಾರಿ ಜಾಗ ಇದೆ.ಆದರೆ ರಾಜಕೀಯ ಹಸ್ತಕ್ಷೇಪದಿಂದ ಇಂದಿರಾ ಕ್ಯಾಂಟಿನ್ ನಿರ್ಮಾಣದ ಹೆಸರಿನಲ್ಲಿ ಸರಕಾರಿ ಜಾಗ ಕೂಡ ಕಬಳಿಕೆಯಾಗುತ್ತಿದೆ.ಹೀಗಾಗಿ ತಾಲೂಕು ಆಡಳಿತ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಹೇಳಿಕೆ.
ಬೈಂದೂರು ತಾಲೂಕು ಆಡಳಿತ ಸೌಧದ ಸರಕಾರಿ ಸ್ಥಳದ ಆವರಣಗೋಡೆ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾಡಳಿತಕ್ಕೆ ವರದಿ ಕಳುಹಿಸಲಾಗಿದೆ.ಸರಕಾರದಿಂದ ಇದುವರೆಗೆ ಅನುದಾನ ಮತ್ತು ಆದೇಶ ಬಂದಿಲ್ಲ.ಸರಕಾರಿ ಜಾಗ ಒತ್ತುವರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.ಮತ್ತು ನಕಲಿ ದಾಖಲೆ ಪ್ರಕರಣ ಕಂಡು ಬಂದಲ್ಲಿ ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ………ಪ್ರದೀಪ್ ಆರ್,ತಹಶೀಲ್ದಾರರು,ಬೈಂದೂರು