ಬೈಂದೂರು: ಸರಕಾರಿ ಶಾಲೆಯಲ್ಲಿ ಮಾತ್ರ ನೈಜ ಪ್ರತಿಭಾವಂತರು ಬೆಳೆಯುತ್ತಾರೆ.ನಾವು ಬೆಳೆದುಬಂದದನ್ನ ನೆನಪಿಟ್ಟುಕೊಳ್ಳುವವರು ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ.ರಾಜ್ಯದಲ್ಲಿ 76 ಸಾವಿರ ಸರಕಾರಿ ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿದೆ.ಒಟ್ಟು 58 ಸಾವಿರ ಅನುದಾನಿತ ಸರಕಾರಿ ಶಾಲೆಗಳಿವೆ.ರಾಜ್ಯದಲ್ಲಿ 1.20 ಕೋಟಿ ವಿದ್ಯಾರ್ಥಿಗಳಿದ್ದಾರೆ.ಶಿಕ್ಷಣ ಇಲಾಖೆ ಸಮಸ್ಯೆಯ ಆಗರ ನಿಜ.ಆದರೆ ಅದನ್ನು ಸವಾಲಾಗಿ ಸ್ವೀಕರಿಸಿದಾಗ ಪರಿಹಾರ ಸಾದ್ಯ.ಪಠ್ಯ ಪುಸ್ತಕ ಪರಿಷ್ಕರಣೆ ಸೇರಿದಂತೆ ಹಲವು ಬದಲಾವಣೆಗಳು ಸರಕಾರಿ ಶಾಲೆಗಳಲಾಗಿದೆ.ನನ್ನ ಶಾಲೆ,ನನ್ನ ಜವಬ್ದಾರಿ ಮೂಲಕ ಸರಕಾರಿ ಶಾಲೆ ಅಭಿವೃದ್ದಿಗೆ ಶಿಕ್ಷಣಾಭಿಮಾನಿಗಳ ಸಹಕಾರ ಪಡೆಯುವ ವಿನೂತನ ಯೋಜನೆಗೆ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.ಶಾಲೆಯ ಅಭಿವೃದ್ದಿ ಊರಿನ ಪ್ರಗತಿ ಸಂಕೇತ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.ಅವರು ಬೈಂದೂರು ಕ್ಷೇತ್ರದ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ ದತ್ತು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಅವಧೂತ ವಿನಯ್ ಗುರೂಜಿ ಗೌರಿಗದ್ದೆ ಮಾತನಾಡಿ ದೇವರಿಗೆ ಹೂ ಇಡುವ ಜೊತೆಗೆ ಹೂವಿನ ಹಾಗೆ ಬದುಕುವುದು ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಬೇಕಾಗಿದೆ.ಕಲಿಯುಗದ ಧರ್ಮವೆಂದರೆ ಸೇವೆ ಮತ್ತು ಸಂಘವಾಗಿದೆ.ದುಡಿಮೆ ಪ್ರತಿಯೊಬ್ಬರಿಗೂ ಇರುತ್ತದೆ.ಆದರೆ ದುಡಿಮೆಯಲ್ಲಿ ಕೈಗೊಳ್ಳುವ ಸಮಾಜಮುಖಿ ಸೇವೆ ಮಾತ್ರ ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸುತ್ತದೆ.ಸತ್ಕಾರ್ಯಗಳು ಸಂತೃಪ್ತಿ ನೀಡುತ್ತದೆ ಎಂದರು.
ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕರಿಸಿ ಮಾತನಾಡಿ ಹುಟ್ಟೂರಿನ ಅಭಿವೃದ್ದಿಗೆ ನಮ್ಮ ಸಂಸ್ಥೆ ವತಿಯಿಂದ ವಿವಿಧ ಶಾಲೆಯಲ್ಲಿ ನಿರಂತರ ಸಹಕಾರ ನೀಡಲಾಗಿತ್ತು.ಬಿಜೂರು ಶಾಲೆ ನಾನು ಕಲಿತ ಶಾಲೆಯಾಗಿದೆ.ಈ ಶಾಲೆಯಲ್ಲಿ ಸೌಲಭ್ಯ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕ್ಷೀಣಿಸಿದೆ.ಹೀಗಾಗಿ ಶಿಕ್ಷಣಾಭಿನಿಗಳು ಹಾಗೂ ಶಾಲಾ ಆಡಳಿತ ಮಂಡಳಿ ದತ್ತು ಪಡೆಯುವ ಮೂಲಕ ಅಭಿವೃದ್ದಿ ಸಹಕಾರ ಕೋರಿದ್ದರ ಪರಿಣಾಮ ನನಗೊಂದು ಅವಕಾಶ ದೊರೆತಿದೆ.ಶಾಲೆ ಬೆಳವಣಿಗೆಯಾಗಿ ಉತ್ತಮ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದಾಗ ಸಮಾಜ ಬದಲಾವಣೆಯಾಗುತ್ತದೆ.ಪ್ರತಿ ಶಾಲೆಗಳಿಗೂ ಕೂಡ ಸ್ಥಳೀಯ ಉದ್ಯಮಿಗಳು ಸಹಕರಿಸಿದಾಗ ಶಾಲೆಯ ಅಭಿವೃದ್ದಿಗೆ ಸಹಕಾರವಾಗುತ್ತದೆ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಉಡುಪಿ ವಿದ್ಯಾಂಗ ಉಪನಿರ್ದೇಶಕ ಗಣಪತಿ ಕೆ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಬಿಜೂರು ಸ.ಹಿ.ಪ್ರಾ.ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾರದಾ ದೇವಾಡಿಗ, ಉಡುಪಿ ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಬೈಂದೂರು ವಲಯ ಪ್ರಾ. ಶಾ. ಶಿ. ಸಂಘದ ಅಧ್ಯಕ್ಷ ಶೇಖರ್ ಪೂಜಾರಿ, ಬಿಜೂರು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಅಡಿಗ, ಸೊರಬ ಮುಖಂಡ ರಾಜಶೇಖರ್, ಡಿ.ಆರ್ ರಾಜು ಕಾರ್ಕಳ, ಬಿಜೂರು ಸ.ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ ಎಸ್ ಬಿಜೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿದ ಡಾ.ಗೋವಿಂದ ಬಾಬು ಪೂಜಾರಿ ದಂಪತಿಗಳನ್ನು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಬಿಜೂರು ಶಾಲೆಯ ಉತ್ಸವ ಸಮಿತಿಯ ಸಂಚಾಲಕ ಶ್ರೀಧರ್ ಬಿಜೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಕೇಶವ ನಾಯ್ಕ್ ವಂದಿಸಿದರು.
ವರದಿ/ಚಿತ್ರ; ಗಿರಿ ಶಿರೂರು