ಬೈಂದೂರು: ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆಯು ಶಿಕ್ಷಕರು ಮತ್ತು ಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೇ ಮಕ್ಕಳು ಬಹುಬೇಗ ವಿಷಯಗಳನ್ನು ಗ್ರಹಿಸುತ್ತಾರೆ. ತರಗತಿಯ ಡಿಜಿಟಲ್ ಪರದೆಯತ್ತ ತಮ್ಮ ಮನಸ್ಸನ್ನು ಕೇಂದ್ರಿಕರಿಸುವದರಿಂದ ಪಠ್ಯದ ವಿಷಯಗಳು ಬಹು ಬೇಗನೆ ಮಕ್ಕಳ ಮನಸ್ಸಿನಲ್ಲಿ ಉಳಿಯುತ್ತವೆ ಎಂದು ನಾಗೂರು ಸಂದೀಪ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ ಹೇಳಿದರು ಅವರು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡಮಾಡಿದ ಸ್ಮಾರ್ಟ್‌ಕ್ಲಾಸ್ ಹಸ್ತಾಂತರಿಸಿ ಮಾತನಾಡಿ ಶಿಕ್ಷಕರು ಪಠ್ಯಕ್ಕೆ ಸಂಭಂದಿಸಿದ ಯಾವುದೇ ವಿಷಯಗಳನ್ನು ಉದಾಹರಣೆಗಳ ಮೂಲಕ ತೋರಿಸುವದರಿಂದ ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ.ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಅಂಕ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಸಮ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳು ಕೂಡ ಅತ್ಯುತ್ತಮ ಶಿಕ್ಷಣ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸಾಕಷ್ಟು ಶಾಲೆಗಳಿಗೆ ನಮ್ಮ ಟ್ರಸ್ಟ್ ಮೂಲಕ ಸ್ಮಾರ್ಟ್‌ಕ್ಲಾಸ್ ಹಾಗೂ ಇತರೆ ಕೊಡುಗೆಗಳನ್ನು ನೀಡುತ್ತಿದ್ದೇವೆ. ನಾವು ನೀಡುವ ಸ್ಮಾರ್ಟ್‌ಕ್ಲಾಸ್ ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಹೆಮ್ಮೆಯ ಪ್ರಜೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಉದ್ಯಮಿಕೆ. ವಿ. ಕಾರಂತ್, ಎಸ್‌ಡಿ.ಎಂಸಿ ಅಧ್ಯಕ್ಷ ಸುರೇಶ ಖಾರ್ವಿ, ಕಿರಿಮಂಜೇಶ್ವರ ಗ್ರಾಪಂ ಸದಸ್ಯ ರಮೇಶ ಖಾರ್ವಿ ಗಂಗೆಬೈಲ್, ಮುಖ್ಯಶಿಕ್ಷಕಿ ಶ್ಯಾಮಲಾ ರಾವ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಪೂಜಾರಿ ಕೊಡೇರಿ, ರಾಮ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.