ಬೈಂದೂರು: ಗ್ರಾಮೀಣ ಭಾಗದ ಜನರು ಪ.ಪಂ ಸೇರ್ಪಡೆಯಾದ ಬಳಿಕ ಅತೀವ ಕಷ್ಟ ಅನುಭವಿಸುತ್ತಿದ್ದಾರೆ.ಅಲ್ಲಿನ ನಿಯಮಗಳಿಂದ ಬೇಸೆತ್ತು ರೊಚ್ಚಿಹೋಗಿದ್ದಾರೆ.ಸಹಸ್ರಾರು ಸಂಖ್ಯೆಯಲ್ಲಿ ನನ್ನನ್ನು ಬೇಟಿಯಾಗಿ ಮನವಿ ನೀಡಿದ್ದಾರೆ.ಹೀಗಾಗಿ ಪ್ರಥಮ ಆದ್ಯತೆಯಾಗಿ ಇವುಗಳನ್ನು ಗ್ರಾಮ ಪಂಚಾಯತ್‌ಗಳಾಗಿ ಉಳಿಸಿಕೊಳ್ಳಬೇಕಿದೆ.ಬಳಿಕ ಪಟ್ಟಣ ಪ್ರದೇಶಗಳನ್ನು ಬೇರ್ಪಡಿಸಿ ತಜ್ಞರ ಮಾಹಿತಿ ಪಡೆದು ಸರಕಾರದ ನಿಯಮಗಳ ಅನುಗುಣವಾಗಿ ಸೇರ್ಪಡೆ ಮೂಲಕ ಮೇಲ್ದರ್ಜೆಗೇರಿಸಬಹುವುದಾಗಿದೆ.ಹಳ್ಳಿಭಾಗದ ಜನರ ಬೇಡಿಕೆಗೆ ಸ್ಪಂಧಿಸಬೇಕಾದ ಅನಿವಾರ್ಯತೆಯಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.
ದಿಕ್ಕು ತಪ್ಪಿಸುವ ಪ್ರಯತ್ನ ಬೇಡ: ಪ.ಪಂ ಗಳಿಂದ ಹಳ್ಳಿಗಳಿಗೆ ಆಗುತ್ತಿರುವ ಸಮಸ್ಯೆ ಪ್ರತಿಯೊಬ್ಬರಿಗೂ ತಿಳಿದಿದೆ.ಹೀಗಾಗಿ ಇವುಗಳ ಮಾಹಿತಿ ಸರಕಾರಕ್ಕೆ ಮುಟ್ಟಿಸಿ ಗ್ರಾಮಗಳನ್ನು ಉಳಿಸಿಕೊಳ್ಳುವ ಮೂಲಕ ಜನರ ಕಷ್ಟಕ್ಕೆ ಸ್ಪಂಧಿಸಬೇಕಿದೆ.ಆದರೆ ಬಿಜೆಪಿ ಮುಖಂಡರು ದಿಕ್ಕು ತಪ್ಪಿಸುವ ಪ್ರಯತ್ನ ಬೇಡ.2014ರಲ್ಲಿ ಯಡ್ತರೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿದ್ದರು.ಈ ಸಂದರ್ಭದಲ್ಲಿ ಪ.ಪಂ ಆಗುವ ಕುರಿತು ನಿರ್ಣಯ ಕೈಗೊಂಡಿಲ್ಲ.ಪುರಸಭೆ ಆಗುವ ಕುರಿತು ನಿರ್ಣಯ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಸದಸ್ಯರು ಇದನ್ನು ವಿರೋಧಿಸಿದ್ದರು.ಆದರೆ ಬೈಂದೂರು ಮತ್ತು ಪಡುವರಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪ.ಪಂ ನಿರ್ಣಯ ಕೈಗೊಂಡಿರುವುದನ್ನು ಈ ಮುಖಂಡರು ಯಾಕೆ ಬಾಯಿ ಬಿಡುತ್ತಿಲ್ಲ.ಬಿಜೆಪಿ ಶಾಸಕರು,ಸರಕಾರ,ಸಂಸದರು ನಿಮ್ಮ ಅಧಿಕಾರದಲ್ಲಿದ್ದಾಗ ಬೈಂದೂರು ತರಾತುರಿಯಲ್ಲಿ ಪ.ಪಂ ಆಗಿ ರೂಪುಗೊಂಡಿದೆ.ಈಗ ಜನ ರೊಚ್ಚಿಗೆದ್ದ ಬಳಿಕ ಬಿಜೆಪಿ ಮುಖಂಡರು ನಾಟಕ ಮಾಡುವುದನ್ನು ನಿಲ್ಲಿಸಲಿ.ಹಳ್ಳಿಭಾಗದ ಜನರ ಕಷ್ಟವನ್ನು ಅರಿತುಕೊಳ್ಳಲಿ ಎಂದರು.
ಮಾಜಿ ಜಿ.ಪಂ ಸದಸ್ಯರಿಗೆ ಸಾಮಾನ್ಯ ಜ್ಞಾನದ ಕೊರತೆಯಿದೆ: ಇತ್ತೀಚೆಗೆ ಬಿಜೆಪಿ ಮಾಜಿ ಜಿ.ಪಂ ಸದಸ್ಯರು ಮಾಧ್ಯಮದ ಎದುರು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರ ಮೇಲೆ ಆರೋಪ ಮಾಡಿದ್ದಾರೆ.ಅವರು ಆಡಳಿತ ವ್ಯವಸ್ಥೆಯ ಕನಿಷ್ಟ ಜ್ಞಾನ ಪಡೆದುಕೊಂಡು ಮಾತಾಡಬೇಕಿದೆ.ಪ.ಪಂ ಆಗಿ ಮೇಲ್ದರ್ಜೆರಿದ ಬಳಿಕ ಗ್ರಾ.ಪಂ ಸದಸ್ಯರಿಗೆ ಅವರ ಅವಧಿ ಮುಗಿಯುವವರೆಗೆ ಅಧಿಕಾರ ಇರುವುದಾಗಿ ಜಿಲ್ಲಾಧಿಕಾರಿಗಳು ಮತ್ತು ಸರಕಾರದ ನಿಯಮವಿದೆ.ಆದರೆ ಅಂದಿನ ಬಿಜೆಪಿ ಶಾಸಕರು ಒಂದು ಸಭೆ ಕೂಡ ಮಾಡಲು ಅವಕಾಶ ನೀಡಿಲ್ಲ.ಪ.ಪಂ ನಾಮನಿರ್ದೇಶನ ಮಾಡುವುದು ಸರಕಾರ.ಎಲ್ಲಿಯವರೆಗೆ ಪಟ್ಟಣ ಪಂಚಾಯತ್ ಇರುತ್ತದೆ ಅಲ್ಲಿಯವರೆಗೆ ನಾಮನಿರ್ದೇಶನ ಸದಸ್ಯರು ಅಧಿಕಾರದಲ್ಲಿರುತ್ತಾರೆ.ಅದರ ಬಳಿಕ ತೆರವುಗೊಳ್ಳುತ್ತದೆ.ಬೈಂದೂರಿನ ಬೇಡಿಕೆಯಿದ್ದು ಬಿಜೆಪಿಯ ಅವಧಿಯಲ್ಲಿ ಆಗಿರುವ ವಿಷಯ ಮರೆಮಾಚಬಾರದು ಎಂದರು.ಪಟ್ಟಣ ಪಂಚಾಯತ್ ಅವ್ಯವಹಾರ ನಡೆದಿರುವ ಕುರಿತು ದಾಖಲೆ ಆಧಾರಿತ ದೂರು ಬಂದಿಲ್ಲ.ದಾಖಲೆ ಇದ್ದಲ್ಲಿ ತನಿಖೆಯಾಗುತ್ತದೆ ಎಂದರು.
ಕೊಲ್ಲೂರು ವ್ಯವಸ್ಥಾಪನಾ ಸಮಿತಿ ರಚನೆಯಾಗಲಿದೆ: ದಕ್ಷಿಣ ಭಾರತದ ತೀರ್ಥಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕರಣ ಈ ವಾರದಲ್ಲಿ ನ್ಯಾಯಾಲಯದಲ್ಲಿ ಅಂತಿಮಗೊಳ್ಳುತ್ತದೆ.ಅದರ ಬಳಿಕ ಅರ್ಜಿ ಸಲ್ಲಿಸಿದವರು ಪೊಲೀಸ್ ವರದಿ ಬಳಿಕ ಪಟ್ಟಿ ಸಿದ್ದಪಡಿಸಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಂದಾಳತ್ವದಲ್ಲಿ ಅಂತಿಮಗೊಳ್ಳಲಿದೆ.ಕೊಲ್ಲೂರಿನ ಅಭಿವೃದ್ದಿಗಾಗಿ ಅತ್ಯುತ್ತಮ ವ್ಯವಸ್ಥಾಪನಾ ಸಮಿತಿ ರಚನೆಯಾಗಲಿದೆ ಎಂದರು.
News/Giri shiruru